ಅಯೋಧ್ಯೆ: ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೆಗಾ ರೋಡ್ ಶೋ ನಡೆಸಿದ್ದು, ರಾಮನೂರಿನಲ್ಲಿ ‘ಜೈ ಮೋದಿ’, ಜೈ ಮೋದಿ ಎಂಬ ಘೋಷಣೆಗಳು ಮೊಳಗಿವೆ.ಪ್ರಧಾನಿ ಮೋದಿ ಅವರು ಇಂದು ಅಯೋಧ್ಯೆಗೆ ಆಗಮಿಸಿದ್ದು, ವಿವಿಧ ಯೋಜನೆಗಳಿಗೆ ಚಾಲನೆ ನೀಡುವ ಮುನ್ನ ಪ್ರಧಾನಿ ಮೋದಿ ಮೆಗಾ ರೋಡ್ ಶೋ ನಡೆಸಿದ್ದಾರೆ.
ಅಯೋಧ್ಯೆಯ ಪ್ರಮುಖ ರಸ್ತೆಯಲ್ಲಿ ಮೋದಿ ಬರೋಬ್ಬರಿ 15 ಕಿ.ಮೀ ರೋಡ್ ಶೋ ನಡೆಸಿದ್ದು, ರಾಮಪಥ್ ಮಾರ್ಗದ ಮೂಲಕ ಪ್ರಧಾನಿ ಮೋದಿ ರೋಡ್ ಶೋ ಸಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನರು ಪ್ರಧಾನಿ ಮೋದಿಯನ್ನು ವೀಕ್ಷಿಸಿ, ಸಂತಸಪಟ್ಟಿದ್ದಾರೆ. ಮೋದಿ ಜನರತ್ತ ಕೈ ಬೀಸುತ್ತಾ ರೋಡ್ ಶೋ ನಡೆಸಿದ್ದಾರೆ. ಪ್ರಧಾನಿ ಮೋದಿಯವರು ಸಂಚರಿಸಿದ ಮಾರ್ಗದಲ್ಲಿ ಕೇಸರಿ ಬಾವುಟಗಳು ರಾರಾಜಿಸಿದ್ದವು.
ಅಯೋಧ್ಯೆಯಲ್ಲಿ ಹೊಸ ರೈಲ್ವೆ ನಿಲ್ದಾಣ ಮತ್ತು ಹೊಸ ವಿಮಾನ ನಿಲ್ದಾಣವನ್ನು ಉದ್ಘಾಟಿಸಲು ಅಯೋಧ್ಯೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ದೇಶದ ವಿವಿಧ ಕಡೆಗಳಿಂದ ಆಗಮಿಸಿದ್ದ ಕಲಾವಿದರ ತಂಡ ಭವ್ಯ ಸ್ವಾಗತ ನೀಡಿದವು.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು 15,700 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದು, ಮತ್ತು ಇತರ ಅನೇಕ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಆರು ವಂದೇ ಭಾರತ್, ಎರಡು ಅಮೃತ್ ಭಾರತ್ ರೈಲುಗಳು ಮತ್ತು ಇತರ ರೈಲು ಯೋಜನೆಗಳಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿಸಿದ್ದಾರೆ. ಅವರು ಬೆಳಿಗ್ಗೆ 11:15 ರ ಸುಮಾರಿಗೆ ತಮ್ಮ ಭೇಟಿಯನ್ನು ಪ್ರಾರಂಭಿಸಿದರು. ಇತರ ನಿರ್ಣಾಯಕ ಯೋಜನೆಗಳಲ್ಲಿ ಅವರು ಅಯೋಧ್ಯೆ ವಿಮಾನ ನಿಲ್ದಾಣ, ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಅಯೋಧ್ಯೆ ಧಾಮ್ ಜಂಕ್ಷನ್ ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ.