ವಿಶ್ವದ ಅತ್ಯಂತ ಕರಾರುವಾಕ್ ಬೌಲರ್ ಗಳಲ್ಲಿ ಒಬ್ಬರಾಗಿರುವ ಜೋಶ್ ಹೇಜಲ್ವುಡ್ ಅವರು ಗಾಯದಿಂದ ಚೇತರಿಸಿ ಯಾವಾಗ ಆಡುತ್ತಾರೆ ಎಂದು ಕಾತುರದಿಂದ ಕಾಯುತ್ತಿದ್ದರು ಕ್ರಿಕೆಟ್ ಪ್ರೇಮಿಗಳು. ಬೀಡುಬೀಸು ಬ್ಯಾಟಿಂಗ್ ಗೆ ಹೆಸರಾಗಿರುವ ಬಾಲಕ ವೈಭವ್ ಸೂರ್ಯವಂಶಿ ಮಾತ್ರ ಒಂದೇ ಓವರ್ ನಲ್ಲಿ 19 ರನ್ ಬಾಚುವ ಮೂಲಕ ಅವರನ್ನೂ ಲೆಕ್ಕಕ್ಕಿಲ್ಲದಂತೆ ಮಾಡಿಬಿಟ್ಟ! 15ರ ಹರೆಯದ ಪೋರನ ಬ್ಯಾಟಿಂಗ್ ವೈಭವದ ಮುಂದೆ ಮಂಕಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 6 ವಿಕೆಟ್ ಗಳಿಂದ ಪರಾಭವಗೊಂಡಿತು. ಕೇವಲ 26 ಎಸೆತದಲ್ಲಿ 78 ರನ್ ಬಾರಿಸಿದ ವೈಭವ್ ಸೂರ್ಯವಂಶಿ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಈ ಮೂಲಕ ಸೀಸನ್ ನಲ್ಲಿ ನಿರಂತರ ನಾಲ್ಕನೇ ಜಯ ಸಂಪಾದಿಸಿದ ರಾಜಸ್ಥಾನ ರಾಯಲ್ಸ್ 8 ಅಂಕಗಳೊAದಿಗೆ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿಯಿತು. ಸೋಲನುಭವಿಸಿದರೂ ಆರ್ ಸಿಬಿ ಆಡಿದ ಮೂರು ಪಂದ್ಯಗಳಲ್ಲಿ 2 ಗೆಲುವುಗಳೊಂದಿಗೆ 4 ಅಂಕಗಳೊAದಿಗೆ 3ನೇ ಸ್ಥಾನದಲ್ಲೇ ಮುಂದುವರಿದಿದೆ. ಗುವಾಹಟಿಯ ಬಾರ್ಸಾಪರ ಕ್ರೀಡಾಂಗಣದಲ್ಲಿ ಏಪ್ರಿಲ್ 10ರ ಶುಕ್ರವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 201 ರನ್ ಕಲೆ ಹಾಕಿದರು. ಉತ್ತರವಾಗಿ ರಾಜಸ್ಥಾನ ರಾಯಲ್ಸ್
ತಂಡ ಇನ್ನೂ 12 ಎಸೆತಗಳು ಬಾಕಿ ಉಳಿದಿದ್ದಾಗಲೇ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ರಾಜಸ್ಥಾನ ತಂಡದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(8 ಎಸೆತದಲ್ಲಿ 13 ರನ್) ಅವರ ವಿಕೆಟ್ ಅನ್ನು ಜೋಶ್ ಹೇಜಲ್ವುಡ್ ಅವರು ಪಡೆದಾಗ ಆರ್ ಸಿಬಿ ಪಾಳಯದಲ್ಲಿ ಸಡಗರ, ಸಂಭ್ರಮವಿತ್ತು. ಆದರೆ ಅದನ್ನು ಕೆಲವೇ ನಿಮಿಷಗಳಲ್ಲಿ ಕಿತ್ತುಕೊಂಡದ್ದು ವೈಭವ್ ಸೂರ್ಯವಂಶಿ. ಸೀಸನ್ ನಲ್ಲಿ ಎರಡನೇ ಬಾರಿಗೆ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅವರು ಔಟಾಗುವ ಮುಂಚೆ 26 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್ ಗಳನ್ನು ಒಳಗೊಂಡ 78 ರನ್ ಬಾರಿಸಿದರು.ವಿಶೇಷವೆಂದರೆ ಈ ಹಿಂದಿನ ಪಂದ್ಯದಲ್ಲಿ ಜಸ್ಪಿತ್ ಬುಮ್ರಾ ಅವರ ಮೇಲೆ ಸವಾರಿ ನಡೆಸಿದ್ದ ವೈಭವ್ ಈ ಬಾರಿ ಆರ್ ಸಿಬಿಯ ಪ್ರಧಾನ ವೇಗಿ ಜೋಶ್ ಹೇಜಲ್ವುಡ್ ಅವರ ಮೇಲೆ ಏರಿ ಹೋದರು.
ಅವರು ಮತ್ತು ಧ್ರುವ್ ಜ್ಯುರೆಲ್ ಅವರು 2ನೇ ವಿಕೆಟ್ ಗೆ 108 ರನ್ ಗಳ ಜೊತೆಯಾಟವಾಡಿದರು. ಈ ಜೋಡಿ ಪವರ್ ಪ್ಲೇನ 6 ಓವರ್ ನ ಮೂರು ಓವರ್ ಮುಗಿಯುವುದರೊಳಗಾಗಿ 97 ರನ್ ಬಾಚಿದ್ದರು. ಅಲ್ಲಿಗೆ ಆರ್ ಸಿಬಿಯ ಜಂಘಾಬಲವೇ ಉಡುಗಿಹೋಯಿತು. ಪಂದ್ಯ ಸಂಪೂರ್ಣವಾಗಿ ಆರ್ ಸಿಬಿ ಕೈತಪ್ಪಿ ಹೋಯಿತು. ವೈಭವ್ ಔಟಾದ ಬಳಿಕ ಉಳಿದ ಕೆಲಸವನ್ನು ಧ್ರುವ್ ಜ್ಯುರೆಲ್(43 ಎಸೆತಗಳಲ್ಲಿ ಅಜೇಯ 81 ರನ್) ಮತ್ತು ರವೀಂದ್ರ ಜಡೇಜಾ(25 ಎಸೆತದಲ್ಲಿ 24) ಮುಗಿಸಿದರು.
ಹಾಲಿ ಚಾಂಪಿಯನ್ ಆರ್.ಸಿ.ಬಿ `ಜೋಶ್’ಗೆ ಪೆಟ್ಟು ಕೊಟ್ಟ 15ರ ಬಾಲಕ



