ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ಬಳಿಕ ಬೆಂಗಳೂರು ಪೂರ್ವ ನಗರ ಪಾಲಿಕೆಯ ಮೊದಲ ಬಜೆಟ್ ಮಂಡನೆಯಾಗಿದೆ. ಪೂರ್ವ ನಗರ ಪಾಲಿಕೆಯ ಅಧಿಕಾರಿಗಳು 2026 – 27ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ.
3,889 ಕೋಟಿ ಗಾತ್ರದ ಬಜೆಟ್ ಇದಾಗಿದ್ದು, ಹಲವು ಯೋಜನೆಗಳನ್ನ ಘೋಷಣೆ ಮಾಡಲಾಗಿದೆ. ಸಿಬ್ಬಂದಿ ವೆಚ್ಚ 302 ಕೋಟಿ ರೂ., ಆಡಳಿತ ವೆಚ್ಚ 82 ಕೋಟಿ ರೂ., ಕಸ ತ್ಯಾಜ್ಯ ವಿಲೇವಾರಿ 300 ಕೋಟಿ ರೂ., ಕಾರ್ಯಾಚರಣೆ, ನಿರ್ವಹಣೆ ವೆಚ್ಚ 342 ಕೋಟಿ ರೂ., ಆರೋಗ್ಯ, ಶಿಕ್ಷಣ & ಕಲ್ಯಾಣ 267 ಕೋಟಿ ರೂ., ಸಾರ್ವಜನಿಕ ಅಭಿವೃದ್ಧಿ ಕಾಮಗಾರಿ 240 ಕೋಟಿ ರೂ., ಸಾಲ ಮರುಪಾವತಿ 193 ಕೋಟಿ ರೂ. ಮೀಸಲು ಸೇರಿ ಒಟ್ಟು 3,889 ಕೋಟಿ ರೂ. ಬಜೆಟ್ ಮಂಡಿಸಲಾಗಿದೆ.
2026 – 27ನೇ ಸಾಲಿನ ಬಜೆಟ್ನಲ್ಲಿ 1,500 ಕೋಟಿ ಆಸ್ತಿ ತೆರಿಗೆಯನ್ನ ಸಂಗ್ರಹ ಮಾಡುವ ಗುರಿಯನ್ನ ಪೂರ್ವ ಪಾಲಿಕೆ ಹೊಂದಿದೆ. ಜೊತೆಗೆ ಜಾಹೀರಾತಿನಿಂದ 68 ಕೋಟಿ ರೂ. ಆದಾಯ ನಿರೀಕ್ಷಿಸಲಾಗ್ತಿದೆ. ಇನ್ನೂ ತನ್ನ ವ್ಯಾಪ್ತಿಯಲ್ಲಿ 4.5 ಲಕ್ಷ ಖಾತೆಗಳನ್ನ ಡಿಜಿಟಲೀಕರಣ ಗೊಳಿಸುವ ಗುರಿಯನ್ನೂ ಹಾಕಿಕೊಂಡಿದ್ದು. ಇದರೊಂದಿಗೆ ಂI ಮೂಲಕ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರನ್ನ ಪತ್ತೆ ಹಚ್ಚುವ ಕಾರ್ಯವನ್ನ ಈ ಆರ್ಥಿಕ ವರ್ಷದಲ್ಲಿ ಮಾಡಲಿದೆ.
ಇಲಾಖೆವಾರು ಪ್ರಮುಖ ಯೋಜನೆಗಳು
* ಬೆಂಗಳೂರು ನಾಗರೀಕರ ಬಹುನಿರೀಕ್ಷಿತ ಯೋಜನೆ ಒಂಟಿಮನೆ ಯೋಜನೆಗೆ ಮತ್ತೆ ಚಾಲನೆ
* 1 ಬಿ.ಎಚ್.ಕೆ ಮನೆ/ಫ್ಲ್ಯಾಟ್ ಖರೀದಿಗೆ 5 ಲಕ್ಷ ರೂ. ಸಹಾಯಧನ
* ಪೌರಕಾರ್ಮಿಕರು, ಎಸ್ಸಿ/ಎಸ್ಟಿ, ಮ್ಯಾನುಯಲ್ ಸ್ಕ್ಯಾವೆಂಜರ್ ಗಳು, ವಿಶೇಷ ಚೇತನರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ
* ಎಸ್ಸಿ/ಎಸ್ಟಿ, ಹಿಂದುಳಿದ ವರ್ಗ, ಪೌರಕಾರ್ಮಿಕರು ಹಾಗೂ ಗ್ರೂಪ್-ಆ ನೌಕರರ ಮಕ್ಕಳಿಗೆ ಶುಲ್ಕ ಮರುಪಾವತಿ
* ಉನ್ನತ ಶಿಕ್ಷಣ ಮತ್ತು ವಿದೇಶ ವ್ಯಾಸಂಗಕ್ಕೆ ಪ್ರೋತ್ಸಾಹಧನ
* ಗಂಭೀರ ಕಾಯಿಲೆಗಳಿಂದ ಬಳಲುವ ಎಸ್ಸಿ/ಎಸ್ಟಿ ಹಾಗೂ ಹಿಂದುಳಿದ ವರ್ಗದವರಿಗೆ ವೈದ್ಯಕೀಯ ವೆಚ್ಚ ಮರುಪಾವತಿ
* ಉದ್ಯೋಗಸ್ಥ ಮಹಿಳೆಯರು ಹಾಗೂ ಪೌರಕಾರ್ಮಿಕ ಮಹಿಳೆಯರಿಗೆ ಉಚಿತ ದ್ವಿಚಕ್ರ ವಾಹನ
* ಮಹಿಳೆಯರಿಗೆ ಹೊಲಿಗೆ ತರಬೇತಿ ಮತ್ತು ಉಚಿತ ಹೊಲಿಗೆ ಯಂತ್ರಗಳು
* ಹೆಚ್ಚುವರಿ ಚಕ್ರಗಳ ದ್ವಿಚಕ್ರ ವಾಹನಗಳು ಹಾಗೂ ಎಲೆಕ್ಟ್ರಿಕ್ ವೀಲ್ಚೇರ್ಗಳ ವಿತರಣೆ
* ಬೀದಿ ವ್ಯಾಪಾರಿಗಳ ಅಭಿವೃದ್ಧಿ
* ಆರ್ಥಿಕ ಉತ್ತೇಜನಕ್ಕಾಗಿ ಇ-ವೆಂಡಿಂಗ್ ವಾಹನಗಳ ವಿತರಣೆ
* ವಿದ್ಯಾರ್ಥಿಗಳಿಗೆ ಬೆಂಬಲ
* ಎಸ್ಸಿ/ಎಸ್ಟಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್
* ನಿರಾಶ್ರಿತರ ಆಶ್ರಯ
* ಈಗಿರುವ 6 ನಿರಾಶ್ರಿತ ಕೇಂದ್ರಗಳ ಉನ್ನತಿ
* ಹೊಸದಾಗಿ 2 ನಿರಾಶ್ರಿತ ಕೇಂದ್ರಗಳ ಸ್ಥಾಪನೆ
* ಕೌಶಲಾಭಿವೃದ್ಧಿ
* ಎಸ್ಸಿ/ಎಸ್ಟಿ, ಹಿಂದುಳಿದ ವರ್ಗ ಹಾಗೂ ಪೌರಕಾರ್ಮಿಕ ಕುಟುಂಬಗಳಿಗೆ ಸ್ಕಿಲ್ ತರಬೇತಿ ಕಾರ್ಯಕ್ರಮಗಳು
* ಸ್ವಯಂ ಉದ್ಯೋಗ ಯೋಜನೆ
* ಸಾರಥಿ ಯೋಜನೆಯಡಿ ಆಟೋರಿಕ್ಷಾ ಖರೀದಿಗೆ 80,000 ರೂ. ಸಹಾಯಧನ
* ಕಾರು ಖರೀದಿಗೆ 1.5 ಲಕ್ಷ ಸಹಾಯಧನ ನೀಡುವ ಯೋಜನೆಗಳನ್ನ ಪಾಲಿಕೆ ಹಾಕಿಕೊಂಡಿದೆ.
ಬೆಂಗಳೂರು ಪೂರ್ವ ನಗರ ಪಾಲಿಕೆಯಿಂದ ಬಜೆಟ್ ಮಂಡನೆ 1,500 ಕೋಟಿ ಆಸ್ತಿ ತೆರಿಗೆ ಸಂಗ್ರಹ ಗುರಿ



