ಕೆ.ಆರ್.ಪುರ: ನಗರ ಪ್ರದೇಶದಂತೆ ಗ್ರಾಮಾಂತರ ಪ್ರದೇಶಗಳು ಕೂಡ ಅಭಿವೃದ್ಧಿ ಹೊಂದಬೇಕು, ಅಲ್ಲಿ ಸಿಗುವ ಮೂಲ ಸೌಕರ್ಯಗಳು ಗ್ರಾಮಾಂತರ ಭಾಗದಲ್ಲಿ ಸಿಗಬೇಕು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಮಹದೇವಪುರ ಕ್ಷೇತ್ರದ ನಿಂಬೆಕಾಯಿ ಪುರದ ಜನಪದರು ರಂಗಮಂದಿರದಲ್ಲಿ ಆಯೋಜಿಸಿದ್ದ ನಾಡಪ್ರಭು ಶ್ರೀ ಕೆಂಪೇಗೌಡ ಅವರ 515ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಿನ ಬೆಂಗಳೂರು ನಾಡಪ್ರಭು ಕೆಂಪೇಗೌಡರು ಕಟ್ಟಿದ ಗೋಪುರದಿಂದ ಹೊರಗಿನವರೆಗೆ ವಿಸ್ತಾರವಾಗಿದ್ದು,ನಾವು ಕೆಂಪೇಗೌಡರ ಆದರ್ಶ ಹಾಗೂ ಅವರು ನಡೆಸಿದ ಆಡಳಿತ ಮಾದರಿಯಲ್ಲಿಯೇ ಮಹದೇವಪುರವನ್ನು ಕಟ್ಟುತ್ತಿದ್ದೇವೆ ಎಂದು ಹೇಳಿದರು.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಅವರ ನೇತೃತ್ವದ ಕೇಂದ್ರ ಸರ್ಕಾರ ಜಲಜೀವನ್ಮಿಷನ್ ಯೋಜನೆ ತಂದಿದ್ದು, ಅದರಂತೆ ಗ್ರಾಮಾಂತರ ಪ್ರದೇಶಗಳಲ್ಲಿ ನಗರದಂತೆ ಮನೆ ಮನೆಗೂ ನಲ್ಲಿಯ ಮೂಲಕ ನೀರು ದೊರೆಯುತ್ತಿದೆ ಎಂದರು.
ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡರು ಯಾವುದೇ ಜಾತಿಗೆ ಸೀಮಿತರಾದವರಲ್ಲ, ಅವರ ಆಡಳಿತದಲ್ಲಿ ಎಲ್ಲಾ ಸಮುದಾಯದ ಜನರಿಗೆ ಸರಿಸಮನಾಗಿ ನ್ಯಾಯ ಒದಗಿಸಿದ್ದಾರೆ, ತಮ್ಮ ದೂರದೃಷ್ಟಿ ಇಟ್ಟುಕೊಂಡು ನಗರವನ್ನು ಕಟ್ಟಿದ್ದಾರೆ, ಮಹಾಪುರುಷರು ಸಾರಿರುವ ಅನೇಕ ವಿಚಾರ, ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು,ಅವರ ತೋರಿದ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.
ಈ ವೇಳೆ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾದ ಮಹದೇವಪುರ ವಿಧಾನಸಭಾ ಕ್ಷೇತ್ರದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷರಾದ ಮನೋಹರ ರೆಡ್ಡಿ, ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಬಿ.ಎನ್.ನಟರಾಜ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಸಮಿತಿಯ ಸದಸ್ಯ ಗಜೇಂದ್ರ, ಮುಖಂಡರಾದ ವೆಂಕಟಸ್ವಾಮಿ ರೆಡ್ಡಿ, ಹೂಡಿ ಪಿಳ್ಳಪ್ಪ, ಕೆ.ಎಂ.ಎಂ ಮಂಜುನಾಥ್, ಎಲ್.ರಾಜೇಶ್, ಜ್ಯೋತಿಪುರ ವೇಣು, ಕಣ್ಣೂರು ಅಶೋಕ್, ಬಿದರಹಳ್ಳಿ ರಾಜೇಶ್, ಕೆಂಪೇಗೌಡ ಇತರರು ಇದ್ದರು.