ದಾವಣಗೆರೆ: ಭಾರತೀಯ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ದಾವಣಗೆರೆ ವಿಶ್ವವಿದ್ಯಾನಿಲಯವು ಮೊಟ್ಟ ಮೊದಲ ಬಾರಿಗೆ ಇದೇ 2026ರ ಮಾರ್ಚ್ 26ರಿಂದ ಏಪ್ರಿಲ್ 4ರ ವರೆಗೆ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಖೋ-ಖೋ ಪಂದ್ಯಾವಳಿಯನ್ನು ಏರ್ಪಡಿಸಿದೆ ಎಂದು ಕುಲಪತಿ ಪ್ರೊ. ಬಿ.ಡಿ.ಕುಂಬಾರ ಹೇಳಿದರು.
ನಗರದ ವಿಶ್ವವಿದ್ಯಾನಿಲಯದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂದ್ಯಾವಳಿಯಲ್ಲಿ ಆತಿಥೇಯ ದಾವಣಗೆರೆ ವಿಶ್ವವಿದ್ಯಾನಿಲಯವೂ ಸೇರಿದಂತೆ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳ ಒಟ್ಟು 178ತಂಡಗಳು ಭಾಗವಹಿಸಲಿವೆ ಎಂದು ವಿವರಿಸಿದರು.
ಪಂದ್ಯಾವಳಿಯಲ್ಲಿ ಪುರುಷ ಮತ್ತು ಮಹಿಳೆಯರ ತಲಾ 89 ತಂಡಗಳು ಭಾಗವಹಿಸುತ್ತಿದ್ದು, ಪ್ರತ್ಯೇಕವಾಗಿ ಎರಡು ಹಂತಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಇದರಲ್ಲಿ ಕರ್ನಾಟಕದ 38 ಮತ್ತು ಆಂಧ್ರದ 28 ತಂಡಗಳೂ ಸೇರಿವೆ. ಮೊದಲ ಹಂತದಲ್ಲಿ ಮಾರ್ಚ್ 26ರಿಂದ 29ರವರೆಗೆ ಪುರುಷರ ಪಂದ್ಯಾವಳಿಗಳು ನಡೆಯಲಿವೆ. ಏಪ್ರಿಲ್ 1ರಿಂದ 4ರ ವರೆಗೆ ಎರಡನೇ ಹಂತದಲ್ಲಿ ಮಹಿಳೆಯರ ವಿಭಾಗದ ಪಂದ್ಯಗಳು ನಡೆಯಲಿವೆ. ಒಟ್ಟು ಸುಮಾರು 3026 ಕ್ರೀಡಾಪಟುಗಳು, 600 ಕ್ರೀಡಾಧಿಕಾರಿಗಳು ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಕೇರಳ, ತಮಿಳುನಾಡಿನ 16 ತಂಡಗಳು ಆಗಮಿಸಿದ್ದು, ಅಭ್ಯಾಸ ಆರಂಭಿಸಿವೆ ಎಂದು ಹೇಳಿದರು.
ತಮಿಳುನಾಡಿನ ಕೇಂದ್ರೀಯ ವಿಶ್ವವಿದ್ಯಾಲಯ ಏರ್ಪಡಿಸಿದ್ದ 2024-25ನೇ ಸಾಲಿನ ದಕ್ಷಿಣ ವಲಯ ಪುರುಷರ ವಿಭಾಗದ ಖೋ-ಖೋ ಚಾಂಪಿಯನ್ಶಿಪ್ನಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ತಂಡ ಎರಡನೇ ಸ್ಥಾನ ಪಡೆದಿತ್ತು. ಆಗ ಮಂಗಳೂರು ವಿಶ್ವವಿದ್ಯಾಲಯ ಪ್ರಶಸ್ತಿ ಗೆದ್ದಿತ್ತು. ಮಹಿಳೆಯರ ವಿಭಾಗದಲ್ಲಿ ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯ ಪ್ರಥಮ ಸ್ಥಾನವನ್ನು ಹಾಗೂ ಮಂಡ್ಯ ವಿಶ್ವವಿದ್ಯಾನಿಲಯವು ಎರಡನೇ ಸ್ಥಾನ ಪಡೆದಿತ್ತು. ಈ ಬಾರಿಯ ಟೂರ್ನಿಯಲ್ಲಿ ಈ ತಂಡಗಳೂ ಭಾಗವಹಿಸುತ್ತಿದ್ದು, ಆಟಗಳು ತೀವ್ರ ತುರುಸಿನಿಂದ ಎಲ್ಲರ ಗಮನ ಸೆಳೆಯುವ ನಿರೀಕ್ಷೆ ಇದೆ ಎಂದು ಕುಲಪತಿ ಪ್ರೊ.ಕುಂಬಾರ ಹೇಳಿದರು.
ಪಂದ್ಯಾವಳಿ ಸಮರ್ಪಕ ನಿರ್ವಹಣೆ ಮತ್ತು ನಿರ್ಣಯಗಳಿಗಾಗಿ 40 ಅಂಪೈರ್ಗಳು, 150ಕ್ಕೂ ಹೆಚ್ಚು ಸ್ವಯಂಸೇವಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹಗಲು ಮತ್ತು ಹೊನಲು ಬೆಳಕಿನಲ್ಲಿ ಪಂದ್ಯಗಳನ್ನು ನಡೆಸಲಾಗುತ್ತಿದ್ದು, ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ 48 ಖೋ-ಖೋ ಪಂದ್ಯಗಳು ನಡೆಯಲಿವೆ. ಅದಕ್ಕಾಗಿ 4ಮಣ್ಣಿನ ಅಂಕಣಗಳನ್ನು ಸಿದ್ಧಪಡಿಸಲಾಗಿದೆ. ವಿಶ್ವವಿದ್ಯಾನಿಲಯದ ವತಿಯಿಂದ ಸಾಧ್ಯವಾದಷ್ಟೂ ಅತ್ಯುತ್ತಮವಾಗಿ ಪಂದ್ಯಾವಳಿಯನ್ನು ಆಯೋಜಿಸಲು ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಕ್ರೀಡಾಧಿಕಾರಿಗಳು, ಅಂಪೈರ್ಗಳ ವಸತಿಗಾಗಿ ವಿಶ್ವವಿದ್ಯಾನಿಲಯದ ಅತಿಥಿಗೃಹದಲ್ಲಿ, ಕ್ರೀಡಾಪಟುಗಳಿಗಾಗಿ ಹಾಸ್ಟೆಲ್ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣದಿಂದ ಕ್ರೀಡಾಪಟುಗಳನ್ನು ಕರೆತರಲು ಬಸ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಊಟ, ಉಪಾಹಾರ, ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಪಂದ್ಯವಳಿಯ ಯಶಸ್ಸಿಗಾಗಿ ಅಗತ್ಯವಿರುವ ಎಲ್ಲ ರೀತಿಯ ಸಿದ್ಧತೆಗಳಿಗೂ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಮತ್ತು ಹೊರ ರಾಜ್ಯಗಳ ವಿವಿಧ ವಿಶ್ವವಿದ್ಯಾಲಯಗಳಿಂದ ಆಗಮಿಸುವ ಕ್ರೀಡಾಪಟುಗಳಿಗೆ ಪ್ರವಾಸ ಕೈಗೊಳ್ಳಲು ಗಮನ ನೀಡಲಾಗಿದೆ. ಸಂತೇಬೆನ್ನೂರಿನ ಪುಷ್ಕರಣಿ, ಚಿತ್ರದುರ್ಗದ ಕಲ್ಲಿನ ಕೋಟೆ, ಹರಿಹರದ ಹರಿಹರೇಶ್ವರ ದೇವಾಲಯ, ಗಾಜಿನ ಮನೆ ವೀಕ್ಷಣೆಗೆ ಸೌಲಭ್ಯ ಒದಗಿಸಲಾಗಿದೆ. ಆಸಕ್ತ ತಂಡಗಳು ಭಾಗವಹಿಸಬಹುದಾಗಿದೆ ಎಂದರು.
ಉದ್ಘಾಟನೆ: ವಿಶ್ವವಿದ್ಯಾನಿಲಯದ ಕ್ರೀಡಾಂಗಣದಲ್ಲಿ ಮಾರ್ಚ್ 26ರಂದು ಸಂಜೆ 5 ಗಂಟೆಗೆ ಏರ್ಪಡಿಸಿರುವ ಉದ್ಘಾಟನಾ ಸಮಾರಂಭದಲ್ಲಿ ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಪಂದ್ಯಾವಳಿಗೆ ಚಾಲನೆ ನೀಡುವರು. ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅಧ್ಯಕ್ಷತೆ ವಹಿಸುವರು. ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ ಅಂಕಣ ಉದ್ಘಾಟಿಸುವರು. ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕುಲಸಚಿವ ಎಸ್.ಬಿ.ಗಂಟಿ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ್, ಟೂರ್ನಿ ಉಸ್ತುವಾರಿ ರಾಜಸ್ತಾನದ ಭವಾನಿ ಪಾಲ್ ಸಿಂಗ್, ಪಂದ್ಯಾವಳಿ ಸಂಯೋಜಕರಾದ ಎಚ್.ತಿಪ್ಪೇಸ್ವಾಮಿ, ಸಂಘಟನಾ ಕಾರ್ಯದರ್ಶಿ ಪ್ರೊ.ಕೆ.ವೆಂಕಟೇಶ, ಕ್ರೀಡಾಧಿಕಾರಿಗಳಾದ ಡಾ.ಕೆ.ಎಂ.ವೀರೇAದ್ರ, ಜೆ. ಮಂಜುನಾಥ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ ಕಣಸೋಗಿ, ಡಾ.ಎಂ.ಎಸ್.ರಾಜಕುಮಾರ, ಡಾ.ಶಿವಶಂಕರ, ಬಸವರಾಜ ಡಮ್ಮಳ್ಳಿ ಮತ್ತಿತರರು ಉಪಸ್ಥಿತರಿದ್ದರು.



