ಬೇತುಲ್ : ಚುನಾವಣಾ ಕರ್ತವ್ಯದ ನಂತರ ಪೊಲೀಸರನ್ನು ಕರೆದೊಯ್ಯುತ್ತಿದ್ದ ಬಸ್ ಶನಿವಾರ ನಸುಕಿನ ವೇಳೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ಪಲ್ಟಿಯಾಗಿದ್ದು, 21 ಪೊಲೀಸರು ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಿಬ್ಬಂದಿ ಚುನಾವಣಾ ಕರ್ತವ್ಯ ಮುಗಿಸಿ ರಾಜ್ಯದ ತಮ್ಮ ತವರು ಜಿಲ್ಲೆ ರಾಜ್ಗಢಕ್ಕೆ ಹಿಂತಿರುಗುತ್ತಿದ್ದಾಗ ಭೋಪಾಲ್-ಬೇತುಲ್ ಹೆದ್ದಾರಿಯ ಬರೇತಾ ಘಾಟ್ ಬಳಿ ಅಪಘಾತ ಸಂಭವಿಸಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಉಪವಿಭಾಗಾಧಿಕಾರಿ ಶಾಲಿನಿ ಪರಸ್ತೆ ತಿಳಿಸಿದ್ದಾರೆ.
“ಐವರು ಪೊಲೀಸರು ಮತ್ತು ಉಳಿದ ಗೃಹರಕ್ಷಕರು ಸೇರಿದಂತೆ ಒಟ್ಟು 40 ಸಿಬ್ಬಂದಿ ಹೊತ್ತ ಬಸ್ ಛಿಂದ್ವಾರಾದಲ್ಲಿ ಚುನಾವಣಾ ಕರ್ತವ್ಯದ ನಂತರ ರಾಜ್ಗಢಕ್ಕೆ ತೆರಳುತ್ತಿದ್ದಾಗ ಇದು ಸಂಭವಿಸಿದೆ” ಎಂದು ಅವರು ಹೇಳಿದರು.
ಗಂಭೀರವಾಗಿ ಗಾಯಗೊಂಡಿರುವ ಎಂಟು ಸಿಬ್ಬಂದಿಗೆ ಬೆತುಲ್ನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಣ್ಣಪುಟ್ಟ ಗಾಯಗೊಂಡವರಿಗೆ ಶಾಹಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.