ಫಿರೋಜಾಬಾದ್: ಉತ್ತರ ಪ್ರದೇಶದ ಫಿರೋಜಾಬಾದ್ ಮೂಲದ ವ್ಯಕ್ತಿಯೊಬ್ಬರು ಮಾಫಿಯಾ ಡಾನ್ ದಾವೂದ್ ಇಬ್ರಾಹಿಂಗೆ ಸೇರಿದ ಮುಂಬೈ ಅಂಗಡಿಯನ್ನು ಖರೀದಿಸಿದ್ದಾರೆ. ಆದರೆ ಹೇಮಂತ್ ಜೈನ್(57) ಅವರು ಈ ಆಸ್ತಿಯನ್ನು ಹೊಂದಲು 23 ವರ್ಷಗಳ ಕಾನೂನು ಮತ್ತು ಅಧಿಕಾರಶಾಹಿ ಅಡೆತಡೆಗಳ ವಿರುದ್ಧ ಹೋರಾಟ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಆದಾಯ ತೆರಿಗೆ ಇಲಾಖೆ ನಡೆಸಿದ ಹರಾಜಿನಲ್ಲಿ ದಾವೂದ್ನ ಆಸ್ತಿಗಳನ್ನು ಖರೀದಿಸಲು ಜನ ಮುಂದೆ ಬರುತ್ತಿಲ್ಲ ಎಂದು ಪತ್ರಿಕೆಯಲ್ಲಿ ಓದಿದ ಜೈನ್, 2001ರ ಸೆಪ್ಟೆಂಬರ್ನಲ್ಲಿ ನಾಗ್ಪಾಡಾ ಪ್ರದೇಶದ ಜಯರಾಜ್ ಭಾಯ್ ಬೀದಿಯಲ್ಲಿರುವ 144 ಚದರ ಅಡಿ ಅಂಗಡಿಗೆ 2 ಲಕ್ಷ ರೂಪಾಯಿ ಪಾವತಿಸಿ ಆಸ್ತಿ ಖರೀದಿಸಿದ್ದಾರೆ.
ಅವರ ಪ್ರಕಾರ, ಈ ಆಸ್ತಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯ 23 ಲಕ್ಷ ರೂ. ಆಗಿದೆ.
ಜೈನ್ ಅವರು ಆಸ್ತಿಯನ್ನು ಖರೀದಿಸಿದ ನಂತರ, ಕೇಂದ್ರ ಸರ್ಕಾರಿ ಒಡೆತನದ ಆಸ್ತಿಯ ವರ್ಗಾವಣೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿ ಅವರನ್ನು ದಾರಿ ತಪ್ಪಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಅಂತಹ ಯಾವುದೇ ನಿಷೇಧ ಅಸ್ತಿತ್ವದಲ್ಲಿಲ್ಲ ಎಂದು ಅವರು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು.
“ನಾನು ಪ್ರಧಾನಿ ಕಚೇರಿಗೆ ಹತ್ತಾರು ಪತ್ರಗಳನ್ನು ಬರೆದಿದ್ದೇನೆ ಮತ್ತು ಸಾಂದರ್ಭಿಕ ಉತ್ತರಗಳನ್ನು ಸ್ವೀಕರಿಸಿದ್ದೇನೆ. ಆದರೆ ನೋಂದಣಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆದಾಯ ತೆರಿಗೆ ಇಲಾಖೆಯಿಂದ ಮೂಲ ಕಡತಗಳು ನಾಪತ್ತೆಯಾಗಿರುವುದು ವಿಳಂಬಕ್ಕೆ ಪ್ರಮುಖ ಕಾರಣ’ ಎಂದು ಜೈನ್ ವಿವರಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಈ ಸಂಬಂಧ ಜೈನ್ ಅವರು ಮುಂಬೈ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬೇಕಾಯಿತು ಮತ್ತು ಹರಾಜಿನಲ್ಲಿ ಆಸ್ತಿಯನ್ನು ಖರೀದಿಸಿದ್ದರಿಂದ ಕಾನೂನು ಹೋರಾಟ ನಡೆಸಬೇಕಾಯಿತು. ನ್ಯಾಯಾಲಯದ ಸೂಚನೆಗಳನ್ನು ಅನುಸರಿಸಿ, ಅಂತಿಮವಾಗಿ ಡಿಸೆಂಬರ್ 19, 2024 ರಂದು 1.5 ಲಕ್ಷ ರೂಪಾಯಿ ಮುದ್ರಾಂಕ ಶುಲ್ಕ ಮತ್ತು ದಂಡವನ್ನು ಪಾವತಿಸಿದ ನಂತರ ಆಸ್ತಿಯನ್ನು ಅವರ ಹೆಸರಿಗೆ ನೋಂದಣಿ ಮಾಡಲಾಗಿದೆ.
ಈ ಕಾನೂನು ವಿಜಯದ ಹೊರತಾಗಿಯೂ, ಜೈನ್ ಅವರು ಇನ್ನೂ ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅಂಗಡಿಯನ್ನು ದಾವೂದ್ನ ಹಿಂಬಾಲಕರು ಹಲವು ವರ್ಷಗಳಿಂದ ಆಕ್ರಮಿಸಿಕೊಂಡಿದ್ದಾರೆ ಮತ್ತು ಅವರು ಖಾಲಿ ಮಾಡಲು ಸಿದ್ಧರಿಲ್ಲ. ಹೇಮಂತ್ ಈಗ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.