This is the title of the web page
This is the title of the web page

`ನೆರೆ ಸಂತ್ರಸ್ಥರಿಗೆ ಬಿಡಿಸಿಸಿ ಬ್ಯಾಂಕ್‍ನಿಂದ 25 ಲಕ್ಷ ರೂ. ನೆರವು’

ರಾಮನಗರ: ಕೊಡಗು ಮತ್ತು ಉತ್ತರ ಕರ್ನಾಟಕದಲ್ಲಿ ನೆರೆಸಂತ್ರಸ್ಥರಿಗೆ ನೀಡಿದ ನೆರವಿನಂತೆ ರಾಮನಗರದ ನೆರೆ ಸಂತ್ರಸ್ಥರಿಗೆ ನೆರವು ನೀಡುವಂತೆ ಮಾಡಿದ ಮನವಿಗೆ ಸಿಎಂ ಸ್ಪಂದಿಸಲಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದರು.

ನಗರದ ಹುಣಸನಹಳ್ಳಿ ರಸ್ತೆಯಲ್ಲಿರುವ ಎಂಡಿಆರ್ ಕಲ್ಯಾಣ ಮಂಟಪದಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮೊಟ್ಟ ಮೊದಲ ಬಾರಿಗೆ 25 ಲಕ್ಷರೂಗಳ ನೆರವಿನಲ್ಲಿ ಅತೀವೃಷ್ಟಿಯಿಂದ ತೊಂದರೆ ಗೊಳಗಾದ ನೆರೆ ಸಂತಸ್ಥ ಪಲಾನುಭವಿಗಳಿಗೆ ನೆರವು ವಿತರಿಸಿ ಅವರು ಮಾತನಾಡಿದರು. ಅತೀವೃಷ್ಟಿ ಸಮಯದಲ್ಲಿ ಜನರ ನೋವಿನ ಆಹಾಕಾರವನ್ನು ಕಣ್ಣಾರೆ ಕಂಡು ಕರಳು ಹಿಂಡುವಂತಹ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಜಿಲ್ಲಾಡಳಿತ ಮತ್ತು ಸರ್ಕಾರ ಸಂಪೂರ್ಣವಾಗಿ ನಿಮಗೆ ನೆರವು ನೀಡುವ ಕಾರ್ಯ ಮಾಡಲಿಲ್ಲ.

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲಿದ್ದು ನಿಮ್ಮ ಅಗತ್ಯಗಳನ್ನು ಪೂರೈಸುವ ಜವಬ್ದಾರಿ ನಮ್ಮಗಳ ಮೇಲಿದೆ. ರೇಷ್ಮೆ ರೀಲರ್ಸ್‍ಗಳಿಗೆ 3% ಬಡ್ಡಿ ದರದಲ್ಲಿ 5 ಲಕ್ಷ ರೂ.ಸಾಲ ವಿತರಿಸಲು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು. ಮುಂದಿನ ಚುನಾವಣೆಯಲ್ಲಿ ಇಕ್ಬಾಲ್ ಹುಸೇನ್‍ಗೆ ಹೆಚ್ಚಿನ ಆಶೀರ್ವಾದ ಮಾಡಿ ಎಂದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹನುಮಂತಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ , ರಾಮನಗರದಲ್ಲಿ ಅತಿ ಹೆಚ್ಚು ಮಳೆ ಬಿದ್ದು ಹಲವಾರು ಮನೆಗಳಿಗೆ ನೀರು ನುಗ್ಗಿದ ಪರಿಣಾಮ  ಮನೆ, ಬಟ್ಟೆ, ಧವಸ ಧಾನ್ಯಗಳನ್ನು ಕಳೆದುಕೊಂಡು ತೊಂದರೆಗೆ ಒಳಗಾಗಿದ್ದ ಜನರ ನೆರವಿಗೆ ಮೊದಲ ಬಾರಿಗೆ ಬಿಡಿಸಿಸಿ ಬ್ಯಾಂಕ್ ವತಿಯಿಂದ 25 ಲಕ್ಷ ರೂ. ಹಣವನ್ನು ಬಿಡುಗಡೆ ಮಾಡಿ  ಸಹಾಯ ಮಾಡಿದ್ದು ತಲಾ 20 ಸಾವಿರದಂತೆ ಪರಿಹಾರ ಚೆಕ್ ವಿತರಿಸುತ್ತಿರುವುದಾಗಿ ಹೇಳಿದರು.

ಎಂಇಐ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸೀರಳ್ಳ ಸಂತ್ರಸ್ಥರಿಗೆ ನೆರವು ನೀಡುವ ವಿಷಯವಾಗಿ ಬ್ಯಾಂಕಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಶ್ರಮದಿಂದ ರೇಷ್ಮೆ ರೀಲರ್ಸ್‍ಗಳಿಗೆ ನೆರವು ಸಿಗುತ್ತಿದ್ದು ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ವಿಧಾನ ಪರಿಷತ್ತು ಸದಸ್ಯ ಎಸ್.ರವಿ, ಜಿಪಂ ಮಾಜಿ ಅಧ್ಯಕ್ಷ ಎಚ್.ಎ.ಇಕ್ಬಾಲ್ ಹುಸೇನ್, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವೈ.ಹೆಚ್. ಮಂಜು ಮಾತನಾಡಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಚ್.ಎನ್.ಅಶೋಕ್, ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಮಾಜಿ ಶಾಸಕ ಕೆ.ರಾಜು, ನಗರಸಭೆ ಅದ್ಯಕ್ಷೆ ಬಿ.ಕೆ.ಪವಿತ್ರಾ, ಸದಸ್ಯರಾದ ದೌಲತ್ ಷರೀಪ್, ಆಯಿಷಾ, ನಿಜಾಂ ಷರೀಪ್, ಅಸ್ಮತ್, ಯುವ ಕಾಂಗ್ರೆಸ್ ರಾಜ್ಯ ಮುಖಂಡ ಕೆಂಪರಾಜು, ನಗರ ಮಹಿಳಾ ಘಟಕದ ಅಧ್ಯಕ್ಷೆ ನಾಗಮ್ಮ, ಮುಖಂಡರಾದ ಎಂ.ಡಿ.ವಿಜಯ್‍ದೇವು,  ನರಸಿಂಹಮೂರ್ತಿ, ಪೈರೋಜ್‍ಖಾನ್, ಖಾಸಿಪ್, ಶಿವಲಿಂಗೇಗೌಡ ಇದ್ದರು.