ಮುಳಬಾಗಿಲು: ಪ್ರತಿ ಪಂಚಾಯ್ತಿಗೊಂದ ಗೋಶಾಲೆ ತೆರೆದು ಜಾನುವಾರುಗಳ ರಕ್ಷಣೆಯ ಜೊತೆಗೆ ಮುಂಗಾರು ಬೆಳೆ ನಷ್ಟ ಪರಿಹಾರ ಪ್ರತಿ ಎಕರೆಗೆ 25 ಸಾವಿರ ಬಿಡುಗಡೆ ಮಾಡಬೇಕೆಂದು ಕಂದಾಯ ಮಂತ್ರಿಗಳನ್ನು ಒತ್ತಾಯಿಸಿ ಡಿ-16 ರ ಶನಿವಾರ ಜಾನುವಾರುಗಳ ಸಮೇತ ಸೌಂದರ್ಯ ಸರ್ಕಲ್ನಲ್ಲಿ ಹೋರಾಟ ಮಾಡಲು ಕರೆದಿದ್ದ, ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ರಾಜ್ಯ ಸರ್ಕಾರವೇ 224 ತಾಲ್ಲೂಕುಗಳನ್ನು ಬರ ಪಿಡಿತ ಎಂದು ಘೋಷಣೆ ಮಾಡಿ ಮೂರು ತಿಂಗಳಾದರೂ ಇದುವರೆವಿಗೂ ರೈತರ ರಾಗಿ, ತೊಗರಿ, ಮತ್ತಿತರ ಬೆಳೆಗಳ ನಯಾಪೈಸೆ ಪರಿಹಾರವನ್ನು ಬಿಡುಗಡೆ ಮಾಡದೆ ಬರ ಪರಿಹಾರ ಹಣಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿಕೊಂಡು ರೈತರಿಗೆ ರಾತ್ರಿವೇಳೆ ಕಾಣುವ ನಕ್ಷತ್ರಗಳನ್ನು ಹಗಲು ವೇಳೆ ತೋರಿಸುತ್ತಿದ್ದಾರೆಂದು ಸರ್ಕಾರದ ರೈತ ವಿರೋಧಿ ದೋರಣೆ ವಿರುದ್ದ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಆಕ್ರೋಷ ವ್ಯಕ್ತಪಡಿಸಿದರು.
ಬೆಂಗಳೂರಿಗೆ ಕೂಗಳದೆ ದೂರದಲ್ಲಿರುವ ಜಿಲ್ಲೆಯನ್ನು ಯಾವುದೇ ಸರ್ಕಾರ ಬಂದರೂ ನಿರ್ಲಕ್ಷೆ ಮಾಡಿ ಕನಿಷ್ಟ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಗಮನಕ್ಕೆ ತರುವಲ್ಲಿ ಜಿಲ್ಲಾಉಸ್ತುವಾರಿ ಸಚಿವರು ಹಾಗೂ ಜನ ಪ್ರತಿನಿಧಿಗಳು ವಿಪಲವಾಗಿದ್ದಾರೆಂದು ಆರೋಪ ಮಾಡಿದರು.
ಬರದ ನಡುವೆ ಬೆಳೆ ನಷ್ಟದಿಂದ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿರುವ ರೈತ ಬೆಳೆ ಕೈಗೆ ಸಿಗದೆ ಹಾಕಿದ ಬಂಡವಾಳ ಬಾರದೆ ಖಾಸಗಿ ಸಾಲಕ್ಕೆ ಸಿಲುಕಿ ಸರ್ಕಾರ ನೀಡುವ ಪರಿಹಾರಕ್ಕಾಗಿ ಜಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದರೆ. ಸರ್ಕಾರ ಮಾತ್ರ ಪ್ರತಿ ಹೆಕ್ಟರ್ಗೆ 2000 ಸಾವಿರ ರೂಗಳು ಬಿಕ್ಷಕ ರೀತಿಯಲ್ಲಿ ಪರಿಹಾರ ಘೋಷಣೆ ಮಾಡಿರುವುದು, ಇಡೀ ದೇಶಕ್ಕೆ ಅನ್ನ ಹಾಕುವ ಅನ್ನದಾತನ ಅವಮಾನ ಎಂದು ಅವ್ಯವಸ್ಥೆ ವಿರುದ್ದ ಕಿಡಿಕಾರಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಬರ ಹಾಗೂ ಬೆಳೆ ನಷ್ಟದಿಂದ ತತ್ತರಿಸಿರುವ ರೈತರಿಗೆ ಸ್ವಾಭಿಮಾನದ ಬದುಕನ್ನು ಲಕ್ಷಾಂತರ ರೈತ ಕುಟುಂಬಗಳಿಗೆ ಕಲ್ಪಿಸಿಕೊಟ್ಟಂತಹ ಹೈನೋದ್ಯಮ ಇಂದು ನಸಿಸಿ ಹೋಗುತ್ತಿದೆ. ಜಾನುವಾರುಗಳ ಸಾಕಾಣಿಕೆಗೆ ಮೇವು ನೀರಿಗಾಗಿ ರೈತ ಕೂಲಿ ಕಾರ್ಮಿಕರು ಅಲೆದಾಡಬೇಕಾದ ಪರಿಸ್ಥಿತಿಯ ಜೊತೆಗೆ ದುಬಾರಿ ಬೆಲೆಗೆ ಮೇವು ಖರೀದಿಸಲಾಗದೆ. ಜಾನುವಾರುಗಳನ್ನು ಸಂತೆಗಳಲ್ಲಿ ಕಟುಕನ ಕೈಗೆ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಪರಿಸ್ತಿತಿ ಇದ್ದರು ಸಮಸ್ಯೆಯನ್ನು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಆರೊಪ ಮಾಡಿದರು.
ಪ್ರತಿ ಪಂಚಾಯ್ತಿಗೊಂದು ಗೋಶಾಲೆ ತೆರೆದು ಬರದಿಂದ ನಷ್ಟವಾಗಿರುವ ಪ್ರತಿ ಎಕೆರೆಗೆ 25 ಸಾವಿರ ಪರಿಹಾರ ವಿತರಣೆ ಮಾಡಿ ರೈತರು ಮತ್ತು ಜಾನುವಾರುಗಳನ್ನು ರಕ್ಷಣೆ ಮಾಡುವಂತೆ ಜಿಲ್ಲಾಡಳಿತ ಮತ್ತು ಕಂದಾಯ ಮಂತ್ರಿಗಳನ್ನು ಒತ್ತಾಯಿಸಿ ಡಿ-16 ರ ಶನಿವಾರ ಜಾನುವಾರುಗಳ ಸಮೇತ ಸೌಂದರ್ಯ ಸರ್ಕಲ್ ಬಂದ್ ಮಾಡಿ ನ್ಯಾಯ ಪಡೆದುಕೊಳ್ಳುವ ತಿರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು ಎಂದರು.
ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್ಪಾಷ, ಬಂಗಾರಿ ಮಂಜು, ತಾ.ಪ್ರ. ಕಾರ್ಯದರ್ಶಿ ರಾಜೇಶ್, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ಸುನಿಲ್ಕುಮಾರ್, ಭಾಸ್ಕರ್, ಗುರುಮೂರ್ತಿ, ಶ್ರೀನಿವಾಸ್, ಜುಬೇರ್ಪಾಷ, ವಿಜಯ್ಪಾಲ್, ವಿಶ್ವ, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ವೇಣು, ಕೇಶವ, ನವೀನ್, ಯಾರಂಘಟ್ಟ ಗಿರೀಶ್, ಸುಪ್ರಿಂ ಚಲ ಇನ್ನು ಮುಂತಾದವರು ಇದ್ದರು.