ಗುಂಡ್ಲುಪೇಟೆ: ತಾಲ್ಲೂಕಿನ ಬೆರಟಹಳ್ಳಿ ಗ್ರಾಮದಲ್ಲಿ ಅಕ್ಷಯ ಮಹದೇಶ್ವರ ಸ್ವಾಮಿಯ 28ನೇ ವರ್ಷದ ಆರಾಧನಾ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.ಸಾವಿರಾರು ಜನರು ದೇವರ ದರ್ಶನ ಪಡೆದರು ಹೊಸ ವರ್ಷಕ್ಕೆ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದ ಗ್ರಾಮಸ್ಥರು ತಮ್ಮ ಗ್ರಾಮದ ಅಕ್ಷಯ ಮಹದೇಶ್ವರ ದೇವಾಲಯದಲ್ಲಿಯೇ ಆರಾಧನೆ ನಡೆಸುವ ಬಗ್ಗೆ ನಿರ್ಧರಿಸಿ ಕಳೆದ 28 ವರ್ಷಗಳಿಂದ ನೂತನ ವರ್ಷಾರಂಭದಂದು ಆರಾಧನಾ ಮಹೋತ್ಸವ ನಡೆಸುತ್ತಾ ಬಂದಿದ್ದಾರೆ.
ಮಹದೇಶ್ವರ ಸ್ವಾಮಿಯ ಉದ್ಭವ ಲಿಂಗಕ್ಕೆ ಎಣ್ಣೆ ಮಜ್ಜನ ಮಾಡಿ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.ಬಳಿಕ ಪಂಚಲೋಹದ ಕೊಳಗ ಧಾರಣೆ ಮಾಡಿ, ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿ ಮಂಗಳಾರತಿ ನಡೆಯಿತು. ಸೋಮಹಳ್ಳಿ ಶಿಲಾಮಠದ ಸಿದ್ದಮಲ್ಲಪ್ಪ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ಬಲಚವಾಡಿ ಭಿಕ್ಷದ ಮಠಾಧ್ಯಕ್ಷ ರಾಜೇಂದ್ರ ಸ್ವಾಮೀಜಿ ಪೂಜಾ ಕಾರ್ಯ ನೆರವೇರಿಸಿದರು.
ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಿಂದ ಪ್ರಮುಖ ಬೀದಿಗಳಲ್ಲಿ ಸಾಗಿದ ಮಹದೇಶ್ವರ ಹುಲಿವಾಹನ, ಅಶ್ವ ವಾಹನ ಉತ್ಸವ ಹಾಗೂ ಹಾಲರವಿ ಮೆರವಣಿಗೆಗೆ ಗ್ರಾಮದ ಜನತೆ ಪೂಜೆ ಸಲ್ಲಿಸಿ ತಮ್ಮ ಭಕ್ತಿ ಭಾವ ಮೆರೆದರು. ದೇವಸ್ಥಾನಕ್ಕೆ ಆಗಮಿಸಿದ್ದ ಹತ್ತು ಸಾವಿರಕ್ಕೂ ಹೆಚ್ಚನ ಭಕ್ತರಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.