ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ 28 ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ನಿಯೋಜನೆ ಆಗುವಂತೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆಪೊ.28 ಅಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಇಲಾಖೆಯು ಕೇಂದ್ರ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದೆ.
ಒಂದೇ ಬಾರಿ 28 ಐಪಿಎಸ್ ಅಧಿಕಾರಿಗಳನ್ನು ಕೇಂದ್ರದ ಸೇವೆಗೆ ಕರೆಸಿಕೊಳ್ಳುತ್ತಿರುವುದು ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಲವು ಅಧಿಕಾರಿಗಳು ಕೇಂದ್ರ ಸೇವೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ತಿಳಿದುಬಂದಿದೆ.ಐಪಿಎಸ್ ಅಧಿಕಾರಿಗಳಾದ ನಿಮಿತ್ ಗೋಯಲ್, ಬಿ.ಎಂ. ಲಕ್ಷ್ಮೀಪ್ರಸಾದ್, ನಿಕ್ಕಂ ಪ್ರಕಾಶ್ ಅಮಿತ್, ಇಲಾಕಿಯಾ ಕರುಣಾಕರನ್, ಡಾ. ಭೀಮಾಶಂಕರ ಗುಳೇದ, ರಾಹುಲ್ ಕುಮಾರ್ ಶಹಾಪುರವಾಡ್, ಧರ್ಮೇಂದ್ರಕುಮಾರ್ ಮೀನಾ, ಉಳಿದಂತೆ ಕೆಎಸ್ಪಿಎಸ್ನಿಂದ ಮುಂಬಡ್ತಿ ಹೊಂದಿದ ಐಪಿಎಸ್ ಅಧಿಕಾರಿಗಳಾದ ಸಿ.ಬಿ. ವೇದಮೂರ್ತಿ, ಶ್ರೀನಾಥ್ ಜೋಶಿ, ಗಿರೀಶ್, ದೇವರಾಜ್ ಸೇರಿ 21 ಮಂದಿ ಕರ್ನಾಟಕ ಮೂಲದ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ನಿಯೋಜಿಸಲಾಗಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ 215 ಐಪಿಎಸ್ ಹುದ್ದೆಗಳಿದ್ದು, ಈ ಪೈಕಿ 150 ಮಂದಿ ನೇರವಾಗಿ ಭಾರತೀಯ ಪೊಲೀಸ್ ಸೇವೆಯಿಂದ ಆಯ್ಕೆಯಾಗಿದ್ದಾರೆ. 65 ಮಂದಿ ಕೆಎಸ್ಪಿಎಸ್ನಿಂದ ಐಪಿಎಸ್ಗಳಾಗಿ ಬಡ್ತಿ ಪಡೆದಿದ್ದಾರೆ. 215 ಮಂದಿ ಐಪಿಎಸ್ ಪೈಕಿ ಶೇ 40 ರಷ್ಟು ಅಂದರೆ 46 ಮಂದಿ ಕೇಂದ್ರ ಸೇವೆಗೆ ತೆರಳಬೇಕೆಂಬ ನಿಯಮವಿದೆ. ಆದರೆ, ಸದ್ಯ 14 ಮಂದಿ ಅಧಿಕಾರಿಗಳಷ್ಟೇ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ 28 ಮಂದಿಯನ್ನು ಕೇಂದ್ರ ಸೇವೆಗೆ ಬರುವಂತೆ ಸೂಚಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.