ಮುಂಬೈ: ಹರ್ಮನ್ಪ್ರೀತ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡ, ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯ ಎರಡನೇ ಪಂದ್ಯವನ್ನು ಶನಿವಾರ ಆಡಲಿದೆ. ಸರಣಿ ಉಳಿಸಿಕೊಳ್ಳಬೇಕಾದರೆ ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ.ವಾಂಖೆಡೆ ಕ್ರೀಡಾಂಗಣದಲ್ಲೇ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ ಮೂರು ಓವರುಗಳಿಗೂ ಹೆಚ್ಚು ಎಸೆತಗಳಿರುವಂತೆ ಆರು ವಿಕೆಟ್ಗಳಿಂದ ಸೋಲನುಭವಿಸಿತ್ತು.
ಭಾರತ 282 (8 ವಿಕೆಟ್ಗೆ) ರನ್ ಗಳಿಸಿದ್ದರೂ, ಆಸ್ಟ್ರೇಲಿಯಾ ಅದನ್ನು ಬೆನ್ನಟ್ಟಿತ್ತು. ಇದು ಭಾರತಕ್ಕೆ, ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸತತ ಎಂಟನೇ ಸೋಲು ಆಗಿತ್ತು.ಜೆಮಿಮಾ ರಾಡ್ರಿಗಸ್ (82) ಮತ್ತು ಪೂಜಾ ವಸ್ತ್ರಾಕರ್ (62) ಮಾತ್ರ ಉತ್ತಮ ಬ್ಯಾಟಿಂಗ್ ಮಾಡಿದ್ದರು. ವೇಗ ಮತ್ತ ಸ್ಪಿನ್ ಬೌಲಿಂಗ್ ಪರಿಣಾಮಕಾರಿ ಆಗಿರಲಿಲ್ಲ. ಫೀಲ್ಡಿಂಗ್ ಕೂಡ ದುರ್ಬಲವಾಗಿತ್ತು.
ಸತತವಾಗಿ ಆಡುತ್ತಿರುವುದೂ ತಂಡದ ಮೇಲೆ ಪರಿಣಾಮ ಬೀರುವಂತೆ ಕಾಣುತ್ತಿದೆ. ಬರೇ 35 ದಿನಗಳ ಅಂತರದಲ್ಲಿ ಭಾರತ ಮೂರೂ ಮಾದರಿಗಳಲ್ಲಿ ಒಟ್ಟು 11 ಪಂದ್ಯಗಳನ್ನು ಆಡಿದೆ.ಅನಾರೋಗ್ಯದಿಂದ ಮೊದಲ ಪಂದ್ಯ ಕಳೆದುಕೊಂಡಿದ್ದ ಸ್ಮೃತಿ ಮಂದಾನಾ ಎರಡನೇ ಪಂದ್ಯಕ್ಕೆ ಲಭ್ಯರಾಗಿದ್ದಾರೆ. ಮೊದಲ ಪಂದ್ಯದಲ್ಲಿ ರಾಡ್ರಿಗಸ್ ಸಹ ಇನಿಂಗ್ಸ್ ವೇಳೆ ದಣಿದಿದ್ದರು.ಇನ್ನೊಂದೆಡೆ ಆಲಿಸಾ ಹೀಲಿ ನಾಯಕತ್ವದ ಆಸ್ಟ್ರೇಲಿಯಾ ತಂಡ ಮೊದಲ ಪಂದ್ಯದ ಸುಲಭ ಗೆಲುವಿನಿಂದ ಉತ್ತಮ ಆತ್ಮವಿಶ್ವಾಸದಿಂದ ಇದೆ.