ಬೆಂಗಳೂರು: ಹೆಸರಾಂತ ಚೌಡಯ್ಯ ಮೆಮೋರಿ ಯಲ್ ಸಭಾಂಗಣದಲ್ಲಿ ನಡೆದ ‘ಎರಡನೇ ವಿಶ್ವ ಕನ್ನಡ ಹಬ್ಬ’ದ ಲಾಂಛನ ಲೋಕಾರ್ಪಣೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಲಯನ್ ಶಾಂತದೇವರಾಜ್ ರವರು ರಾಷ್ಟ್ರಧ್ವಜ ವನ್ನು ಗೌರವದಿಂದ ವೇದಿಕೆಗೆ ತಂದರು. ಈ ಸಂದರ್ಭದಲ್ಲಿ ಎಲ್ಲರೂ ನಿಂತು ರಾಷ್ಟ್ರಗೀತೆ ಹಾಗೂ ನಾಡಗೀತೆ ಹಾಡುವ ಮೂಲಕ ಗೌರವ ಸೂಚಿಸಿದರು. ಪ್ರಾರ್ಥನಾ ಗೀತೆಯನ್ನು ಎಂ. ಎಸ್. ಲೀಲಾವತಿಯವರು ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದ ಸಾನಿಧ್ಯ ಮಹರ್ಷಿ ಡಾ. ಆನಂದ್ ಗುರೂಜಿ, ಅಧ್ಯಕ್ಷತೆ ಸಚಿವ ಶಿವರಾಜ್ ತಂಗಡಗಿಯವರು ವಹಿಸಿಕೊಂಡಿದ್ದರು. ಕಲಾವಿದರ ಸಂಘದ ಅಧ್ಯಕ್ಷ ದೊಡ್ಡಣ್ಣ, 2ನೇ ವಿಶ್ವ ಕನ್ನಡ ಹಬ್ಬದ ಸರ್ವಾಧ್ಯಕ್ಷರಾದ ಡಾ.ಸಿ. ಸೋಮಶೇಖರ್, ಖ್ಯಾತ ಸಾಹಿತಿ ಷಡಕ್ಷರಿ, ಗೋಪಾಲನ್ ಗ್ರೂಪ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಮುಂತಾದ ಗಣ್ಯರು ಕನ್ನಡ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಅತಿಥಿ ಗಣ್ಯರು ತಾಯಿ ಭುವನೇಶ್ವರಿಯ ವಿಗ್ರಹಕ್ಕೆ ಪುಷ್ಪಾನಮನ ಸಲ್ಲಿಸಿದರು.ಕನ್ನಡ ಸಂಸ್ಕೃತಿ ಸಚಿವರಿಂದ 2ನೇ ವಿಶ್ವ ಕನ್ನಡ ಹಬ್ಬದ ಲಾಂಛನ ಲೋಕಾರ್ಪಣೆಯಾಯಿತು. ಈ ಸಂದರ್ಭದಲ್ಲಿ ಎಲ್ಲರೂ ಎದ್ದು ನಿಂತು ಲಾಂಛನಕ್ಕೆ ಗೌರವ ಸಲ್ಲಿಸಿದರು. ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ಶಿವಕುಮಾರ್ ನಾಗರ ನವಿಲೆಯವರು ಪ್ರಾಸ್ತವಿಕ ನುಡಿಗಳೊಂದಿಗೆ ಮೊದಲ ವಿಶ್ವ ಕನ್ನಡ ಹಬ್ಬದ ಯಶಸ್ವಿ ಹಾಗೂ ಎರಡನೇ ವಿಶ್ವ ಕನ್ನಡ ಹಬ್ಬದ ತಯಾರಿ ಕುರಿತು ಮಾತನಾಡುತ್ತಾ, ಸಚಿವ ಶಿವರಾಜ್ ತಂಗಡಗಿಯವರ ಸಹಕಾರ ಮತ್ತು ಸಹಾಯವನ್ನು ಕೋರಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕನ್ನಡ ಸಂಸ್ಕೃತಿ ಸಚಿವರು, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆಯ ಸಾಧನೆಗಳು ಮತ್ತು ಸೇವೆಗಳಿಗೆ ಶ್ಲಾಘನೀಯ ವ್ಯಕ್ತಪಡಿಸಿದರು. ವಿಶೇಷವಾಗಿ ಕೋವಿಡ್ ಸಂದರ್ಭದಲ್ಲಿ ಮಾಡಿರುವ ಅತ್ಯುತ್ತಮ ಕೆಲಸಗಳಿಗೆ ಮೆಚ್ಚುಗೆ ಸೂಚಿಸಿದರು.
2ನೇ ವಿಶ್ವ ಕನ್ನಡ ಹಬ್ಬದ ಚಿಹ್ನೆ ಬಿಡುಗಡೆ ಕಾರ್ಯಕ್ರಮ ಕುರಿತು ಮಾತನಾಡುತ್ತಾ, ಸಿಂಗಾಪುರದಲ್ಲಿ ಹಮ್ಮಿಕೊಂಡಿರುವ ಕನ್ನಡ ಹಬ್ಬಕ್ಕೆ ನನ್ನ ಸಂಪೂರ್ಣ ಸಹಕಾರವಿದೆ. ಕನ್ನಡ ಭಾಷೆ ಉಳಿಸುವ ಕೆಲಸಕ್ಕೆ ನಾನು ಕೈಜೋಡಿಸುತ್ತೇನೆ. ಏಪ್ರಿಲ್ ತಿಂಗಳಲ್ಲಿ ಚುನಾವಣೆ ಬಿಸಿ ಇರುತ್ತೆ, ಆದರೂ ಈ ಹಬ್ಬದ ಮೇಲಿನ ಅಭಿಮಾನದಿಂದ ಬಿಡುವು ಮಾಡಿಕೊಂಡು ಖಂಡಿತ ಸಿಂಗಾಪುರದ ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ತಿಳಿಸಿದರು.
ಡಾ. ಸಿ. ಸೋಮಶೇಖರ್ ರವರು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆ ಕನ್ನಡ ನಾಡು ನುಡಿಯ ಮೇಲಿಟ್ಟಿರುವ ಅಪಾರ ಅಭಿಮಾನ ಹಾಗೂ ಕಾಳಜಿಗೆ ಮೆಚ್ಚುಗೆ ಸೂಚಿಸಿದರು. ಶಿವಕುಮಾರ್ ನಾಗರ ನವಿಲೆರವರ ಪ್ರಾಮಾಣಿಕ ಪ್ರಯತ್ನಕ್ಕೆ ಯಶಸ್ಸು ಸಿಗಲಿ, ಸಿಂಗಾಪುರದ ಕಾರ್ಯಕ್ರಮದ ಯಶಸ್ವಿಗೆ ಒಟ್ಟಾಗಿ ಶ್ರಮಿಸೋಣ ಎಂದರು.
ಅನಂತರ ಮಾತನಾಡಿದ ಆನಂದ್ ಗುರೂಜಿಯವರು, ಎರಡನೇ ವಿಶ್ವ ಕನ್ನಡ ಹಬ್ಬ ಯಾವುದೇ ವಿಗ್ನವಿಲ್ಲದೆ, ಯಶಸ್ವಿಯಾಗಲಿ. ಆ ಭಗವಂತನ ಕೃಪಾ ಕಟಾಕ್ಷ ಹಾಗೂ ತಾಯಿ ಭುವನೇಶ್ವರಿಯ ಆಶೀರ್ವಾದ ಹಾಗೂ ನನ್ನ ಸಹಕಾರ ನಿಮಗಿದ್ದು, ಕನ್ನಡಮ್ಮನ ಹೃದಯ ಶ್ರೀಮಂತಿಕೆಯನ್ನು ಸಿಂಗಾಪುರದಲ್ಲಿ ಪಸರಿಸುವ ಕೆಲಸವನ್ನು ನಾವೆಲ್ಲರೂ ಒಟ್ಟಾಗಿ ಯಶಸ್ವಿ ಮಾಡೋಣ ಎಲ್ಲರಿಗೂ ಶುಭವಾಗಲಿ ಎಂದರು. ಇದೇ ವೇಳೆ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನೂತನ ಅಧ್ಯಕ್ಷರುಗಳಿಗೆ ಅಧಿಕಾರ ನೀಡಲಾಯಿತು. ಆಗಮಿಸಿದ ಮುಖ್ಯ ಅತಿಥಿಗಳಿಗೆ ವಿಶೇಷ ಸನ್ಮಾನ ನೀಡಿದ ಸಂಸ್ಥೆ ಅಭಿನಂದನೆಗಳನ್ನು ತಿಳಿಸಿತು. ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರನ್ನು ಹಾಗೂ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಕಲಾ ನವೀನ್, ಗಂಗರಾಜಮ್ಮ, ಡಾ. ಪ್ರಸನ್ನ ಇದ್ದರು.