ಬೆಂಗಳೂರು: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಹಾಗೂ ಕನ್ನಡ ಕೂಟ ನ್ಯೂಯಾರ್ಕ್ ಸಹಯೋಗದಲ್ಲಿ ಅಮೆರಿಕಾದ ನ್ಯೂಯಾರ್ಕ್ ನಲ್ಲಿ ಆಯೋಜಿಸುತ್ತಿರುವ 3ನೇ ವಿಶ್ವ ಕನ್ನಡ ಹಬ್ಬದ ಸಂಚಾಲಕರಾಗಿ ಶ್ರೀದೇವಿ ನಾಯಕ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವನ್ನು ಶ್ರೀ ಪ್ರಸಾದ್ ಗುರೂಜಿಯವರು ಉದ್ಘಾಟಿಸಿ ಶ್ರೀದೇವಿ ನಾಯಕ್ ಅವರಿಗೆ ಆದೇಶ ಪತ್ರ ನೀಡಿ ಅಭಿನಂದಿಸಿದರು.ಹಿರಿಯ ಕಾಂಗ್ರೆಸ್ ಮುಖಂಡ ರಾಜಶೇಖರ್ ನಾಯಕ್ ಅವರು 3ನೇ ವಿಶ್ವ ಕನ್ನಡ ಹಬ್ಬದ ಎರಡನೇ ವಿಡಿಯೋ ತುಣುಕು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ನ್ಯೂಯಾರ್ಕ್ ನಲ್ಲಿ ಮೂರನೇ ವಿಶ್ವ ಕನ್ನಡ ಹಬ್ಬ ಆಯೋಜಿಸುತ್ತಿರುವುದು ಸಂತಸದ ಸಂಗತಿ. ಈ ಕಾರ್ಯಕ್ರಮದ ಯಶಸ್ಸಿಗೆ ತನು, ಮನ, ಧನದ ಸಹಕಾರ ನೀಡುವುದಾಗಿ ಹೇಳಿದರು.
ಶ್ರೀದೇವಿ ನಾಯಕ್ ಅವರು ಮಾತನಾಡಿ; ತಮಗೆ ವಹಿಸಿರುವ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ಶಕ್ತಿ ಮೀರಿ ನಿಭಾಯಿಸಿ ಕಾರ್ಯಕ್ರಮದ ಯಶಸ್ಸಿಗೆ ದುಡಿಯುವುದಾಗಿ ಹೇಳಿದರು.
ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ಅಧ್ಯಕ್ಷರಾದ ಟಿ.ಶಿವಕುಮಾರ್ ಅವರು ಹಿಂದಿನ ವಿಶ್ವ ಕನ್ನಡ ಹಬ್ಬಕ್ಕೆ ದುಡಿದವರನ್ನು ಸ್ಮರಿಸಿ; ಶ್ರೀದೇವಿ ನಾಯಕ್ ಅವರಿಗೆ ಶುಭಕೋರಿದರು.
ಈ ಸಂದರ್ಭದಲ್ಲಿ ಕಾವ್ಯ, ಸಂತೋಷ್, ಸೌಜನ್ಯ , ಸ್ನೇಹ ಮತ್ತಿತರರು ಹಾಜರಿದ್ದರು.