ಮಂಗಳೂರು: ತನ್ನ ಮೂವರು ಮಕ್ಕಳನ್ನು ಕೊಂದು, ಪತ್ನಿಯನ್ನು ಬಾವಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಇಲ್ಲಿನ ನ್ಯಾಯಾಲಯವೊಂದು ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.
ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ ಅವರು ಡಿ. 31ರಂದು ಹಿತೇಶ್ ಶೆಟ್ಟಿಗಾರ್ ಎಂಬುವವರಿಗೆ ಮರಣದಂಡನೆ ವಿಧಿಸಿದ್ದಾರೆ.
ಪೊಲೀಸರ ಪ್ರಕಾರ, ಈ ಘಟನೆಯು 2022ರ ಜೂನ್ 23ರಂದು ಪದ್ಮನೂರು ಗ್ರಾಮದಲ್ಲಿ ಸಂಭವಿಸಿದೆ. ಆರೋಪಿ ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಸಾವಿಗೆ ಕಾರಣನಾಗಿದ್ದ. ಪತ್ನಿ ಲಕ್ಷ್ಮಿಯನ್ನು ಅದೇ ಬಾವಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ್ದ ಎನ್ನಲಾಗಿದೆ.
ಆರೋಪಿ ನಿರುದ್ಯೋಗಿಯಾಗಿದ್ದು, ಪತ್ನಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಘಟನೆ ನಡೆದ ದಿನ, ಅಸಮಾಧಾನಗೊಂಡಿದ್ದ ಆತ ಮಕ್ಕಳು ಶಾಲೆಯಿಂದ ಹಿಂದಿರುಗಿದ ನಂತರ ಬಾವಿಗೆ ತಳ್ಳಿದ್ದಾನೆ. ಪತ್ನಿಯನ್ನು ತಳ್ಳಿದ್ದಾನೆ. ಮಹಿಳೆ ಸಹಾಯಕ್ಕಾಗಿ ಕಿರುಚಿದಾಗ, ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಹೂವಿನ ವ್ಯಾಪಾರಿ ಆಕೆಯನ್ನು ರಕ್ಷಿಸಿದ್ದಾರೆ.
ಹಿರಿಯ ಮಗಳು ಬಾವಿಗೆ ಅಳವಡಿಸಿದ್ದ ಪಂಪ್ ಪೈಪ್ ಅನ್ನು ಹಿಡಿದುಕೊಂಡು ಪ್ರಾಣ ಉಳಿಸಿಕೊಳ್ಳಲು ಯತ್ನಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆದರೆ, ಆಕೆ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಆರೋಪಿ ಚಾಕುವಿನಿಂದ ಪೈಪ್ ತುಂಡರಿಸಿದ್ದಾನೆ.
ದೂರಿನ ಆಧಾರದ ಮೇಲೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ 302 (ಕೊಲೆ) ಮತ್ತು 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್ಪೆಕ್ಟರ್ ಕುಸುಮಾಧರ ನೇತೃತ್ವದಲ್ಲಿ ಎಎಸ್ಐ ಸಂಜೀವ ಅವರ ತಂಡ ವಿವರವಾದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ವಿಚಾರಣೆ ವೇಳೆ ಪ್ರಾಸಿಕ್ಯೂಟರ್ ಮೋಹನ್ ಕುಮಾರ್ ಬಲವಾದ ಸಾಕ್ಷ್ಯವನ್ನು ಪ್ರಸ್ತುತಪಡಿಸಿದರು. ಮಕ್ಕಳ ಅಮಾನುಷ ಹತ್ಯೆ ಮತ್ತು ಪತ್ನಿಯ ಜೀವಹರಣಕ್ಕೆ ಯತ್ನ ಗರಿಷ್ಠ ಶಿಕ್ಷೆಗೆ ಅರ್ಹವಾಗಿದೆ ಎಂದು ನ್ಯಾಯಾಲಯ ತೀರ್ಮಾನಿಸಿದೆ.