ರಾಮನಗರ: ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರಿನ ಹೊಂಡದಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ತಾಲೂಕಿನ ಅಚ್ಚಲು ಗ್ರಾಮದ ಬೆಟ್ಟದ ಸಮೀಪ ಶುಕ್ರವಾರ ಸಂಜೆ ನಡೆದಿದೆ.
ಪಟ್ಟಣದ ಮೆಹಬೂಬ್ ನಗರ ನಿವಾಸಿಗಳಾದ ಸಬಾದ್ (14), ಸುಲ್ತಾನ್ (13) , ರಿಯಾಜ್ ಖಾನ್ (15) ಮೃತ ವಿದ್ಯಾರ್ಥಿಗಳು. ಶಾಲೆಗೆ ರಜೆ ಇದ್ದಕಾರಣ ಮೆಹಬೂಬ್ ನಗರದ 8 ಮಂದಿ ವಿದ್ಯಾರ್ಥಿಗಳು ಈಜಾಡಲೆಂದು ಅಚ್ಚಲು ಗ್ರಾಮದ ಜೂಟ್ ಕಾರ್ಖಾನೆಯ ಹಿಂಭಾಗದಲ್ಲಿದ್ದ ನೀರಿನ ಹೊಂಡಕ್ಕೆ ಹೋಗಿದ್ದಾರೆ. ಈಜುಬಾರದೆ ನೀರಿಗಿಳಿದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.
ತಮ್ಮ ಸಹಪಾಠಿಗಳು ನೀರಿನಲ್ಲಿ ಮುಳುಗಿದ್ದನ್ನು ಕಂಡ ಇತರರು ತಕ್ಷಣ ಸ್ಥಳೀಯರಿಗೆ ಸುದ್ದಿಮುಟ್ಟಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮ ದಳದ ಸಿಬ್ಬಂದಿಗಳು ಆಗಮಿಸಿ ಮೃತ ಬಾಲಕರ ಶವವನ್ನು ಹೊರಗೆ ತೆಗೆದಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೆಟ್ಟದ ತಪ್ಪಲಿನಲ್ಲಿ ಕಲ್ಲುಬಂಡೆಗಳ ನಡುವೆ ನೀರು ನಿಂತು ಹೊಂಡ ನಿರ್ಮಾಣವಾಗಿದ್ದು, 8ರಿಂದ 10 ಅಡಿಯಷ್ಟು ಆಳವಿರುವ ಈ ಹೊಂಡದಲ್ಲಿ ಈಜುಬಾರದೆ ಮಕ್ಕಳು ನೀರಿಗಿಳಿದಿದ್ದೇ ಅವಘಡಕ್ಕೆ ಕಾರಣವೆಂದು ಸ್ಥಳೀಯರು ತಿಳಿಸಿದ್ದಾರೆ.