( ವರದಿ: ಸಿ.ವಿ.ಲಕ್ಷ್ಮಣರಾಜು)
ಶಿಡ್ಲಘಟ್ಟ: ಮೊನ್ನೆ ಜಿಲ್ಲಾ ಆಡಳಿತ ಭವನದ ಸರ್. ಎಂ. ವಿಶ್ವೇಶ್ವರಯ್ಯ ಭವನದಲ್ಲಿ ನಡೆದ ರಾಷ್ಟ್ರ ನಾಯಕರ ಪೂರ್ವ ಸಿದ್ಧತಾ ಸಭೆಯಲ್ಲಿ ಅರ್ಥಪೂರ್ಣ ಪಾಲ್ಗೊಳ್ಳುವಿಕೆ. ನಿನ್ನೆ ಹೊಸ ತಾಲೂಕು ಕೇಂದ್ರ ಮಂಚೇನಹಳ್ಳಿ ಯಲ್ಲಿ ಕಂದಾಯ ಗ್ರಾಮಗಳ ಪರಿಶೀಲನೆ ಮತ್ತು ಸರ್ಕಾರಿ ಜಾಗಗಳಲ್ಲಿ ನಿರ್ಮಿಸಿರುವ ವಸತಿ ಹಾಗೂ ಜಮೀನುಗಳಿಗೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸುವ ಬಗ್ಗೆ ಸಲಹೆ ಸೂಚನಾ ಸಭೆ. ಇಂದು ಶಿಡ್ಲಘಟ್ಟಕ್ಕೆ ಆಗಮಿಸಿ ಕಂದಾಯ ಇಲಾಖೆ ಅಧಿಕಾರಿಗಳ ಸುದೀರ್ಘ ಸಭೆಯನ್ನು ನಡೆಸಿ ಪತ್ರಕರ್ತರಿಗೆ ಸರ್ಕಾರದ ವಿವಿಧ ಯೋಜನೆಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಂದಾಯ ಸಚಿವರ ಆಶಯದ ಯೋಜನೆಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸುವ ಕರ್ತವ್ಯ. ಇವೆಲ್ಲವನ್ನೂ ಮಾಡಿದ್ದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಾದ ಡಾ. ಜಿ ಪ್ರಭು ಅವರು. ಹೌದು, ಇಂದು ಜಿಲ್ಲಾಧಿಕಾರಿಗಳು ಶಿಡ್ಲಘಟ್ಟ ತಾಲೂಕಿಗೆ ತಮ್ಮ ಭೇಟಿಯನ್ನು ಮಾಡಿದ್ದರು. ಮೊದಲಿಗೆ ಮೇಲೂರು ಗ್ರಾಮಕ್ಕೆ ತೆರಳಿ ಪರೀಕ್ಷಾ ಕೇಂದ್ರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಮತ್ತು ಉತ್ಸಾಹವನ್ನು ತುಂಬಿದ್ದು ಮಾತ್ರವಲ್ಲದೆ ಪರೀಕ್ಷಾ ಭಯವನ್ನು ಹೋಗಲಾಡಿಸಿದರು. ಅಲ್ಲಿಂದ ನೇರವಾಗಿ ಬಂದು ತಾಲೂಕು ಆಡಳಿತ ಭವನದಲ್ಲಿ ಕಂದಾಯ ಇಲಾಖೆಯ 4 ಹೋಬಳಿಗಳ ಸಿಬ್ಬಂದಿಗಳ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳನ್ನು ಹೇಗೆ ಜಾರಿಗೊಳಿಸಬೇಕು ಮತ್ತು ಜಾರಿಗೊಳಿಸಲಾಗಿದೆ ಎಂಬುದರ ಬಗ್ಗೆ ವಿವರವನ್ನು ಪಡೆದರು. ಈಗಾಗಲೇ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿ ಕರ್ತವ್ಯವನ್ನು ನಿರ್ವಹಿಸಿರುವ ಅವಕಾಶವನ್ನು ನಿರ್ವಹಿಸಿರುವ ಜಿಲ್ಲಾಧಿಕಾರಿಗಳು ಜನ
ಸಾಮಾನ್ಯರ ಮತ್ತು ಸಾರ್ವಜನಿಕರು ತಮ್ಮ ಮನೆ ಮತ್ತು ನಿವೇಶನ ಸೇರಿದಂತೆ ಜಮೀನುಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಪಡೆಯಲು ಅಲೆಯಬಾರದು ಎಂಬ ಉದ್ದೇಶದಿಂದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಸರಳ ವಿಧಾನಗಳನ್ನು ಅನುಸರಿಸುವಂತೆ ಸೂಚಿಸಿದರು. ಜನರೊಂದಿಗೆ ಸರ್ಕಾರಿ ನೌಕರರು ವಿಶೇಷವಾಗಿ ಕಂದಾಯ ಇಲಾಖೆ ಸಿಬ್ಬಂದಿ ಸೌಜನ್ಯವಾಗಿ ಮತ್ತು ಜವಾಬ್ದಾರಿಯತವಾಗಿ ವರ್ತಿಸುವುದು ಹೇಗೆ ಎಂಬುದನ್ನು ತಿಳಿಸಿಕೊಟ್ಟರು.
ಪತ್ರಕರ್ತರೊಂದಿಗೆ ಮಾತನಾಡುವ ಮುಕ್ತ ಅವಕಾಶವನ್ನು ಕಲ್ಪಿಸಿಕೊಟ್ಟ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿ ಡಾ. ಜಿ ಪ್ರಭು. ತಹಸಿಲ್ದಾರ್ ಕುಮಾರಿ ಗಗನ ಸಿಂಧು ಅವರು ಜಿಲ್ಲಾಧಿಕಾರಿಗಳು ಊಟದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಾರೆ ಎಂದು ಹೇಳುವ ಮುನ್ನವೇ ಜಿಲ್ಲಾಧಿಕಾರಿಗಳು ನಿಂತ ನಿಲುವಲ್ಲಿಯೇ ಪತ್ರಕರ್ತರಿಗೆ ಸರ್ಕಾರದ ಯೋಜನೆಗಳನ್ನು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಹೇಗೆ ಅನುಷ್ಠಾನಗೊಳಿಸುತ್ತದೆ ಎಂದು ವಿವರಿಸತೊಡಗಿದರು.
ವಾರದ ಮೂರು ದಿನಗಳು ತಾನು ಜಿಲ್ಲೆಯ ಕ್ಷೇತ್ರದ ಪ್ರವಾಸ ಮಾಡುವ ಮೂಲಕ ಜನರನ್ನು ಮುಕ್ತವಾಗಿ ಭೇಟಿ ಮಾಡುತ್ತೇನೆ. ಎಲ್ಲಾ ಕಂದಾಯ ವಲಯಗಳ ಅಧಿಕಾರಿಗಳ ಜೊತೆಗೆ ಮಾತನಾಡಿ ವಿವಿಧ ಇಲಾಖೆ ಯೋಜನೆಗಳು ಯಾವ ರೀತಿ ಅನುಷ್ಠಾನಗೊಳ್ಳುತ್ತಿವೆ ಎಂಬುದನ್ನು ಪರಾಮರ್ಶೆ ಮಾಡುತ್ತೇನೆ. ಬಹು ಮುಖ್ಯವಾಗಿ ತಾಲೂಕು ಆಡಳಿತ ಕೇಂದ್ರದಲ್ಲಿ ಜನಸಾಮಾನ್ಯರು ನೀಡುವ ಅಹವಾಲುಗಳನ್ನು ಸ್ವೀಕರಿಸುವ ಕೇಂದ್ರ ಸಕ್ರಿಯವಾಗಿ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಅಹವಾಲುಗಳಿಗೆ ಸ್ವೀಕೃತಿ ಪತ್ರವನ್ನು ನೀಡಿ ಸಂಬAಧಪಟ್ಟ ಶಾಖೆಗೆ ರವಾನಿಸಿ ಕಾಲಮಿತಿಯೊಳಗೆ ಪರಿಹಾರ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತದೆ . ಶಿಡ್ಲಘಟ್ಟ ತಾಲೂಕಿನಲ್ಲಿ ಸುಮಾರು 15 ಸಾವಿರ ದರಕಾಸ್ತು ಅರ್ಜಿಗಳು ಬಂದಿವೆ. ಇವುಗಳಲ್ಲಿ ರೂ.1000 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 4,300 ಕಡತಗಳಿದ್ದು 3000 ಕಡತಗಳ ನೈಜತೆ ದೃಢೀಕರಿಸಿ ದಾಖಲಾತಿಗಳನ್ನು ಅಂತರ್ಜಾಲದಲ್ಲಿಯೇ ಪಡೆಯುವ ವ್ಯವಸ್ಥೆ ಮಾಡಲಾಗುತ್ತಿದೆ.ಖಾಸಗಿ ಹಾಗೂ ಸರ್ಕಾರಿ ಜಾಗಗಳಲ್ಲಿ 40 50 ವರ್ಷಗಳಿಂದ ಮನೆಗಳನ್ನು ಕಟ್ಟಿಕೊಂಡಿರುವವರಿಗೆ ಸಕ್ರಮಮಾಡಿಕೊಡುವ ಹಾಗೂ ಅವರಿಗೆ ಇ ಸ್ವತ್ತು ಮಾಡಿಕೊಡುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳು ಮುಂದುವರಿದಿದೆ. ಇದರಿಂದ ನೈಜ ಮಾಲೀಕತ್ವ ಸಿಗುವಂತಾಗುತ್ತದೆ. ಪವತಿವಾರಸು ಖಾತೆ ಮತ್ತು ಇತರೆ ಖಾತೆಗಳ ಬಗ್ಗೆ ಈಗಾಗಲೇ ಅನೇಕ ಅದಾಲತ್ತುಗಳನ್ನು ಮಾಡಲಾಗಿದೆ. ತಾಲೂಕಿನಲ್ಲಿ ಸುಮಾರು ಎರಡೂವರೆ ಲಕ್ಷ ಖಾತೆಗಳು ಬಾಕಿ ಇರುವುದನ್ನು ಗಮನಿಸಲಾಗಿದೆ.ದಾಖಲಾತಿಗಳನ್ನು ಒದಗಿಸಿದರೆ ಅವುಗಳ ಅನುಸಾರವಾಗಿ ಖಾತೆಗಳನ್ನು ಮಾಡಿಕೊಡಲಾಗುತ್ತದೆ. ಒಂದು ವೇಳೆ ಹೆಣ್ಣು ಮಕ್ಕಳಿಗೂ ಭಾಗ ಕೊಡಬೇಕು ಎಂದು ನಿರ್ಲಕ್ಷ ಮಾಡಿದರೆ ಜಂಟಿ ಖಾತೆ ಮಾಡಿಕೊಡಲು ಸೂಚಿಸಲಾಗಿದೆ. ಜಮೀನುಗಳಿಗೆ ಹೋಗದೆ ಅಡ್ಡಿಪಡಿಸುವುದು, ಹೊಲ ಮತ್ತು ಜಮೀನುಗಳಿಗೆ ಹೋಗುವ ದಾರಿಗಳನ್ನು ಅತಿಕ್ರಮಿಸಿಕೊಂಡಿರುವುದು, ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವುದು, ಸರ್ಕಾರಿ ಕಾಲುವೆಗಳನ್ನು ಮುಚ್ಚಿರುವುದು ಈ ಎಲ್ಲಾ ಕೆಲಸಗಳನ್ನು ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳು ಗಮನಿಸಿ, ಕಾರ್ಯಪ್ರವೃತ್ತ ಆಗುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಜಿಲ್ಲಾಧಿಕಾರಿಗಳೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ತಹಸಿಲ್ದಾರ್ ಕುಮಾರಿ ಗಗನಸಿಂದು ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಹೇಮಾವತಿ ಉಪಸ್ಥಿತರಿದ್ದರು.
ವಾರದ 3 ದಿನಗಳು ಪ್ರತಿ ಕ್ಷೇತ್ರವಾರು ಪ್ರವಾಸ ಜಿಲ್ಲಾಧಿಕಾರಿ ಜಿ.ಪ್ರಭು ಅವರ ಪ್ರಗತಿಪರ ಹೆಜ್ಜೆಗಳು



