ದೇವನಹಳ್ಳಿ: ಜಿಲ್ಲಾಡಳಿತದ ವತಿಯಿಂದ ನವೆಂಬರ್ 30 ರಂದು ಜಿಲ್ಲಾಮಟ್ಟದ ಕನಕದಾಸರ ಜಯಂತಿಯ ಕಾರ್ಯಕ್ರಮವನ್ನು ದೇವನಹಳ್ಳಿ ಟೌನ್ ನ ಅಂಬೇಡ್ಕರ್ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಶಿವಶಂಕರ್. ಎನ್ ಅವರು ತಿಳಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ದಾಸ ಶ್ರೇಷ್ಠ ಕನಕದಾಸ ಜಯಂತಿ ಕಾರ್ಯಕ್ರಮ ಅಂಗವಾಗಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನೂ ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಅನುಸರಿಸಿಕೊಂಡು ಅರ್ಥಪೂರ್ಣವಾಗಿ ಜಿಲ್ಲೆಯಲ್ಲಿ ಆಚರಿಸಬೇಕಿದೆ. ಕಾರ್ಯಕ್ರಮದ ದಿನದಂದು ಬೆಳಿಗ್ಗೆ 9.00 ಗಂಟೆಗೆ ದಾಸ ಶ್ರೇಷ್ಠ ಕನಕದಾಸರ ಉತ್ಸವ ಪಲ್ಲಕ್ಕಿಯು ದೇವನಹಳ್ಳಿ ಟೌನ್ ನ ಬೈಪಾಸ್ ನಲ್ಲಿರುವ ಕನಕದಾಸ ವೃತ್ತದಿಂದ ಹೊರಟು ವೇದಿಕೆ ಕಾರ್ಯಕ್ರಮ ನಡೆಯುವ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಭವನದವರೆಗೆ ಮೆರವಣಿಗೆ ಹೊರಡಲಿದೆ.
ಸಭಾ ಕಾರ್ಯಕ್ರಮವು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಮೆರವಣಿಗೆಯಲ್ಲಿ ಕಲಾತಂಡಗಳು ಹಾಗೂ ಸ್ಥಬ್ದಚಿತ್ರಗಳ ಪಲ್ಲಕ್ಕಿಗಳೊಂದಿಗೆ ಮೆರವಣಿಗೆ ಜರುಗಲಿದೆ. ಜಯಂತಿ ಆಚರಣೆಯ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿ ಅಗತ್ಯ ಸಿದ್ದತೆ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ವೇದಿಕೆ ಕಾರ್ಯಕ್ರಮದಲ್ಲಿ ದಾಸ ಶ್ರೇಷ್ಠ ಕನಕದಾಸರ ವಿಚಾರದಾರೆಗಳ ಕುರಿತು ಉಪನ್ಯಾಸ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮುದಾಯದಲ್ಲಿ ಸಾಧನೆ ಗೈದ ಸಮುದಾಯದ ಸಾಧಕರಿಗೆ ಸನ್ಮಾನ ಮಾಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಬಿ ನೀಲಮ್ಮ, ಸಮುದಾಯದ ಮುಖಂಡರು, ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.