ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2026ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಸಲುವಾಗಿ ನಡೆಯುತ್ತಿರುವ ಆಫ್ರಿಕಾ ಭಾಗದ ಪ್ರಾಂತೀಯ ಅರ್ಹತಾ ಸುತ್ತಿನ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಜಿಂಬಾಬ್ವೆ ತಂಡ ನೂತನ ವಿಶ್ವ ದಾಖಲೆ ನಿರ್ಮಿಸಿದೆ.
ಗಾಂಬಿಯಾ ವಿರುದ್ಧ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಕ್ಯಾಪ್ಟನ್ ಸಿಕಂದರ್ ರಾಜಾ, ಕೇವಲ 33 ಎಸೆತಗಳಲ್ಲಿ ಬಾರಿಸಿದ ಮನಮೋಹಕ ಶತಕದ ಬಲದಿಂದ ಜಿಂಬಾಬ್ವೆ ತಂಡ 20 ಓವರ್ಗಳಲ್ಲಿ 344/4 ರನ್ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದೆ.ನೈರೋಬಿಯಲ್ಲಿನ ರೌರಾಕ ಸ್ಪೋರ್ಟ್ಸ್ ಕ್ಲಬ್ ಗ್ರೌಂಡ್ನಲ್ಲಿ ಬುಧವಾರ (ಅಕ್ಟೋಬರ್ 23) ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬ್ವೆ ತಂಡ 20 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 344 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ವಿಶ್ವ ದಾಖಲೆಯ ಬೃಹತ್ ಮೊತ್ತವಾಗಿದೆ.
ಇದಕ್ಕೂ ಮುನ್ನ 2023ರಲ್ಲಿ ನಡೆದ ಏಷ್ಯನ್ ಗೇಮ್ಸ್ ಪಂದ್ಯದಲ್ಲಿ ನೇಪಾಳ ತಂಡ ಮಂಗೋಲಿಯಾ ಎದುರು ಬಾರಿಸಿದ್ದ 314/3 ರನ್ ವಿಶ್ವ ದಾಖಲೆಯ ಸ್ಕೋರ್ ಆಗಿತ್ತು. ಈ ದಾಖಲೆಯನ್ನು ಜಿಂಬಾಬ್ವೆ ಈಗ ಅಳಿಸಿಹಾಕಿದೆ. ಅಷ್ಟೇ ಅಲ್ಲದೆ ಟೆಸ್ಟ್ ಕ್ರಿಕೆಟ್ ಆಡುವ ತಂಡಗಳ ಪೈಕಿಯೂ 300ಕ್ಕೂ ಹೆಚ್ಚು ಸ್ಕೋರ್ ಮಾಡಿದ ಮೊದಲ ತಂಡ ಎನಿಸಿಕೊಂಡಿದೆ.