ಬೆಂಗಳೂರು: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರ ಪರಿಹಾರ ಘೋಷಣೆ ಮಾಡಲಾಗಿದೆ. 3454 ಕೋಟಿ ರೂಪಾಯಿಗಳನ್ನು ಬರ ಪರಿಹಾರವಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಘೋಷಣೆ ಮಾಡಿದೆ.
ಕಳೆದ ವರ್ಷದ ಸೆಪ್ಟಂಬರ್ ತಿಂಗಳಲ್ಲಿಯೇ ರಾಜ್ಯ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಲು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಸುಮಾರು 18172 ಕೋಟಿ ರೂಪಾಯಿಗಳಷ್ಟು ಬರ ಪರಿಹಾರ ಬಿಡುಗಡೆ ಮಾಡಲು ಮನವಿ ಸಲ್ಲಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಲು ವಿಳಂಬ ಮಾಡುತ್ತಲೇ ಬಂದಿತು.
ಬರ ಪರಿಹಾರ ಬಿಡುಗಡೆಗಾಗಿ ಖುದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕೇಂದ್ರ ಸರ್ಕಾರದ ಬಳಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿದ್ದರು.ಆದರೂ ಸಹ ಕೇಂದ್ರ ಸರ್ಕಾರ ಈ ಬಗ್ಗೆ ಸಭೆ ಮಾಡುವುದಾಗಿ ತಿಳಿಸಿ ಯಾವುದೇ ಸಭೆಯನ್ನು ಸಹ ಮಾಡಿರಲಿಲ್ಲ.
ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಲು ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಕೂಡಲೇ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣೆ ವೇಳೆ ಕೇಂದ್ರ ಒಂದು ವಾರದೊಳಗಾಗಿ ಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಪರಿಹಾರ ಬಿಡುಗಡೆ ಮಾಡಲು ಒಂದು ವಾರ ಕಾಲಾವಕಾಶವನ್ನು ಸುಪ್ರೀಂಕೋರ್ಟ್ನಲ್ಲಿ ಕೋರಿತ್ತು. ಪುನಃ ಸುಪ್ರೀಂಕೋರ್ಟ್ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಈ ತಿಂಗಳ 29ರಂದು ವಿಚಾರಣೆ ನಡೆಸಲಿದೆ.