ಬೆಂಗಳೂರು: ಬೆಂಗಳೂರಿನಲ್ಲಿ ಪ್ರಮುಖ ರಸ್ತೆಗಳ ವೈಟ್ಟಾಪಿಂಗ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಗುತ್ತಿಗೆದಾರರು ಬಾಕಿ ಇರುವ 3,850 ಕೋಟಿ ರೂ. ಬಿಲ್ ಬಿಡುಗಡೆಗೆ ಆಗ್ರಹಿಸಿ ಮುಷ್ಕರ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.
ಬಿಬಿಎಂಪಿ ಗುತ್ತಿಗೆದಾರರ ಸಂಘ ಮತ್ತು ಕರ್ನಾಟಕ ಗುತ್ತಿಗೆದಾರರ ಸಂಘ(ಕೆಸಿಎ) ಸರ್ಕಾರಕ್ಕೆ ಬಾಕಿ ಹಣವನ್ನು ಪಾವತಿಸಲು ಜನವರಿ 13 ರಿಂದ ಒಂದು ವಾರ ಕಾಲಾವಕಾಶ ನೀಡಿದೆ.
ರಾಜ್ಯದಾದ್ಯಂತ ಕಾಮಗಾರಿಗಳಿಗೆ 32,000 ಕೋಟಿ ರೂ.ಗಳಿಗೂ ಹೆಚ್ಚು ಬಿಲ್ ಬಾಕಿ ಇದೆ ಎಂದು ಕೆಸಿಎ ಸದಸ್ಯರು ತಿಳಿಸಿದ್ದಾರೆ.
ಈ ಕುರಿತ ಟಿಎನ್ಐಇ ಜೊತೆ ಮಾತನಾಡಿದ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ನಂದ ಕುಮಾರ್, “ಬಿಬಿಎಂಪಿಗೆ ಕೈಗೆತ್ತಿಕೊಂಡ ಕಾಮಗಾರಿಗಳ ಜೊತೆಗೆ, ರಾಜ್ಯ ಸರ್ಕಾರದಿಂದ ಅನುದಾನ ಒದಗಿಸುವ ನಗರದಲ್ಲಿಯೂ ನಾವು ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತೇವೆ. ಈಗ, ಬಿಬಿಎಂಪಿಯ ಬಾಕಿ ಬಿಲ್ ಮೊತ್ತ 1,850 ಕೋಟಿ ರೂ.ಗಳನ್ನು ತಲುಪಿದೆ ಮತ್ತು ರಾಜ್ಯ ಸರ್ಕಾರದಿಂದ ಬಾಕಿ ಇರುವ ಬಿಲ್ ಮೊತ್ತ ಸುಮಾರು 2,000 ಕೋಟಿ ರೂ.ಗಳಾಗಿದೆ”. ಈ ಬಾಕಿ ಮೊತ್ತವು 2021 ರಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳಿಗೆ ಸಂಬಂಧಿಸಿದೆ ಎಂದು ಹೇಳಿದ್ದಾರೆ.
ಹಿಂದೆ ನಮ್ಮ ಪ್ರತಿಭಟನೆಯ ನಂತರ, ಜುಲೈ 2023 ರಲ್ಲಿ ಭಾಗಶಃ ಬಾಕಿ ಬಿಲ್ ಬಿಡುಗಡೆ ಮಾಡಲಾಗಿತ್ತು. “2021 ರಲ್ಲಿ ಮಾಡಿದ ಕಾಮಗಾರಿಗಳಿಗೆ ಬಿಬಿಎಂಪಿ ಒಟ್ಟು ಮೊತ್ತದ ಶೇ. 25 ರಷ್ಟನ್ನು ತಡೆಹಿಡಿಯಿತು” ಎಂದು ನಂದ ಕುಮಾರ್ ತಿಳಿಸಿದ್ದಾರೆ.
ಪ್ರತಿಭಟನೆ ನಡೆದಾಗ ಮಾತ್ರ ಬಿಬಿಎಂಪಿ ಮತ್ತು ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬಾಕಿ ಹಣವನ್ನು ಪಾವತಿಸುತ್ತವೆ ಎಂದು ಗುತ್ತಿಗೆದಾರರೊಬ್ಬರು ಹೇಳಿದ್ದಾರೆ.
ಕಾಮಗಾರಿಗಾಗಿ ಬ್ಯಾಂಕ್ಗಳು ಮತ್ತು ಲೇವಾದೇವಿದಾರರಿಂದ ಭಾರಿ ಸಾಲವನ್ನು ಪಡೆದಿರುವುದರಿಂದ ಮತ್ತು ಅದನ್ನು ಮತ್ತಷ್ಟು ವಿಸ್ತರಿಸಲು ಸಾಧ್ಯವಾಗದ ಕಾರಣ ನಾವು ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.