ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾ ಎದುರಿನ ಮಳೆಪೀಡಿತ ದ್ವಿತೀಯ ಟಿ20 ಪಂದ್ಯವನ್ನು 5 ವಿಕೆಟ್ಗಳಿಂದ ಕಳೆದುಕೊಂಡ ಭಾರತಕ್ಕೀಗ ಸರಣಿ ಸಮಬಲದ ಒತ್ತಡ ಎದುರಾಗಿದೆ. ಗುರು ವಾರ ಜೊಹಾನ್ಸ್ಬರ್ಗ್ನ ನ್ಯೂ ವಾಂಡರರ್ ಸ್ಟೇಡಿಯಂನಲ್ಲಿ 3ನೇ ಹಾಗೂ ಅಂತಿಮ ಮು ಖಾಮುಖಿ ಏರ್ಪಡಲಿದ್ದು, ಸರಣಿ ಸಮಬಲ ಸಾಧಿಸಲು ಸೂರ್ಯಕುಮಾರ್ ಪಡೆ ಇದನ್ನು ಗೆಲ್ಲಲೇಬೇಕಿದೆ.
ಮೊದಲ ಮುಖಾಮುಖಿ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡ ಬಳಿಕ ಎರಡೇ ಪಂದ್ಯಗಳಲ್ಲಿ ಸರಣಿ ಇತ್ಯರ್ಥವಾಗ ಬೇಕಾದ ಸನ್ನಿವೇಶ ಎದುರಾಗಿತ್ತು. ಮಂಗಳವಾರದ ದ್ವಿತೀಯ ಪಂದ್ಯಕ್ಕೂ ಮಳೆಯ ಕಾಟ ಎದುರಾಯಿತು. ಭಾರತದ ಇನ್ನಿಂಗ್ಸ್ ಮುಕ್ತಾಯಕ್ಕೆ ಇನ್ನೇನು 3 ಎಸೆತಗಳಿವೆ ಎನ್ನುವಾಗ ಸುರಿದ ಮಳೆಯಿಂದ ಟಾರ್ಗೆಟ್ ಬದಲಿಸಬೇಕಾಗಿ ಬಂತು.
ಭಾರತ 7 ವಿಕೆಟಿಗೆ 180 ರನ್ನುಗಳ ಸವಾಲಿನ ಮೊತ್ತ ಪೇರಿಸಿತ್ತು. ದಕ್ಷಿಣ ಆಫ್ರಿಕಾ 15 ಓವರ್ಗಳಲ್ಲಿ 152 ರನ್ ಗುರಿ ಲಭಿಸಿತು. ಅಂದರೆ, ಓವರ್ಗೆ ಸರಾಸರಿ 10ರಷ್ಟು ರನ್ ತೆಗೆಯಬೇಕಾದ ಒತ್ತಡ. ಮಾರ್ಕ್ರಮ್ ಪಡೆ ಇದನ್ನು ಯಶಸ್ವಿಯಾಗಿ ನಿಭಾಯಿಸಿ ವಿನ್ನಿಂಗ್ ಮಾರ್ಕ್ ಗಳಿಸಿತು. 13.5 ಓವರ್ಗಳಲ್ಲಿ 5 ವಿಕೆಟಿಗೆ 154 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು.