ಬೆಳಗಾವಿ: ಬೆಳಗಾವಿಯಲ್ಲಿ ಆರಂಭಗೊಂಡ ಚಳಿಗಾಲ ಅಧಿವೇಶನ ನಾಲ್ಕು ದಿನಗಳ ನಂತರ ಇಂದು ಬೆಳಿಗ್ಗಿನಿಂದ ಸುಗಮವಾಗಿ ನಡೆದಿದೆ.
ಅಧಿವೇಶನ ಆರಂಭಗೊಂಡ ದಿನವಾದ ಡಿಸೆಂಬರ್ 9 ಸೋಮವಾರ ವಿಧಾನಸಭೆಯಲ್ಲಿ ವಕ್ಫ್ ಹಗರಣದ ವಿಷಯದೊಂದಿಗೆ ಕಲಾಪ ಆರಂಭಗೊಂಡು ತದನಂತರ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲು ಅರ್ಧದಿನವಾಯಿತು.
ವಕ್ಫ್ ಹಗರಣದ ವಿಷಯ ಸೇರಿದಂತೆ ಅಂದು ಪ್ರಶ್ನೋತ್ತರ ಕಲಾಪಕ್ಕೆ ಸಮಯ ಮೀಸಲಾಗಿತ್ತು. ಎರಡನೇ ದಿನವಾದ ಮಂಗಳವಾರ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದಿಂದ ಅವರಿಗೆ ಸಂತಾಪ ಸೂಚಿಸಲು ಕಲಾಪವನ್ನು ನಿಗಧಿಗೊಳಿಸಲಾಯಿತು.ಮೂರನೇ ದಿನವಾದ ಬುಧವಾರ ಕೃಷ್ಣ ನಿಧನಕ್ಕಾಗಿ ಅವರ ಗೌರವಾರ್ಥ ಕಲಾಪಕ್ಕೆ ರಜೆ ಘೋಷಿಸಲಾಗಿತ್ತು. ನಾಲ್ಕನೇ ದಿನವಾದ ಗುರುವಾರ ಕಲಾಪ ಮಂಗಳವಾರ ನಡೆದ ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿಚಾರ್ಜ್ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಬಹುತೇಕ ದಿನದ ಅರ್ಧಭಾಗ ಅದಕ್ಕಾಗಿಯೇ ಮೀಸಲಾಗಿತ್ತು.
ರಾತ್ರಿವರೆಗೂ ಪ್ರಶ್ನೋತ್ತರ ಕಲಾಪ ಮತ್ತಿತರ ವಿಷಯಗಳಿಗೆ ಕಲಾಪದ ವೇಳೆ ಮುಗಿದಿತ್ತು. ಇಂದು ಬೆಳಿಗ್ಗೆ 10 ಗಂಟೆಗೆ ನಿಗಧಿತ ಸಮಯಕ್ಕೆ ಕಲಾಪ ಆರಂಭಗೊಂಡಿದ್ದು, ಪ್ರಶ್ನೋತ್ತರದೊಂದಿಗೆ ಕಲಾಪ ಮುಂದುವರಿದಿದೆ.ಅತ್ತ ವಿಧಾನಪರಿಷತ್ನಲ್ಲೂ ಸಹ ಇಂದು ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ನಿನ್ನೆ ನಿಧನರಾದ ಪರಿಷತ್ನ ಮಾಜಿ ಸದಸ್ಯ ಕೇಶವರಾವ್ ನಿಟ್ಟೂರ್ರವರಿಗೆ ಸಂತಾಪ ಸೂಚಿಸಲಾಯಿತು.ನಂತರ ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡು ಸುಗಮವಾಗಿ ಎರಡು ಸದನಗಳಲ್ಲಿ ಕಲಾಪ ನಡೆಯುತ್ತಿದೆ.