ಗೌರಿಬಿದನೂರು: ಭಾರತೀಯ ಹವಾಮಾನ ಇಲಾಖೆಯ ಈ ವಾರದ ಮುನ್ಸೂಚನೆ ಪ್ರಕಾರ ಗೌರಿಬಿದನೂರು ತಾಲ್ಲೂಕಿನಲ್ಲಿ ಮೇ.19 ರಿಂದ 23 ರವರೆಗೆ ಮೋಡ ಕವಿದ ವಾತಾವರಣ ಇರಲಿದ್ದು ಅಲ್ಲಲ್ಲಿ ಚದುರಿದಂತೆ ಹಗುರವಾದ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವತಿಯಿಂದ ತಿಳಿದುಬಂದಿದೆ ಕೃಷಿ ಸಲಹೆಗಳು: ಮಳೆ ಬಂದಿರುವ ಕಡೆ ರೈತರು ಇಳಿಜಾರಿಗೆ ಅಡ್ಡಲಾಗಿ ಮಾಗಿ ಉಳುಮೆ ಮಾಡಬೇಕು.
ಇದರಿಂದ ನೀರು ಇಂಗುವಿಕೆ ಹೆಚ್ಚಾಗುತ್ತದೆ ಮತ್ತು ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ. ರೈತರು ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡಿ ಜಮೀನನ್ನು ಮುಂಗಾರು ಬಿತ್ತನೆಗೆ ಸೂಕ್ತ ರೀತಿಯಲ್ಲಿ ತಯಾರಿಸಿಕೊಳ್ಳುವುದು.ಮುಂಗಾರಿಗೆ ಬಿತ್ತನೆ ಬೀಜಗಳನ್ನು ಸಿದ್ಧತೆ ಮಾಡಿಕೊಳ್ಳಬೇಕು. ರೈತರು ಪ್ರಮಾಣಿಕರಿಸಿದ ಬಿತ್ತನೆ ಬೀಜಗಳನ್ನು ಅಧಿಕೃತ ಮಾರಾಟಗಾರರಿಂದಲೇ ಖರೀದಿಸಬೇಕಾಗಿ ಸಲಹೆ ನೀಡಲಾಗಿದೆ.
ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡುವಾಗ ರೈತರು ಬೀಜಗಳನ್ನು ರೈಜೋಬಿಯಂ ಸೂಕ್ಷ್ಮಾಣು ಜೀವಿಗಳಿಂದ ಉಪಚರಿಸಬೇಕು (20 ಗ್ರಾಂ/ ಕೆ.ಜಿ.) ಹಸಿರೆಲೆ ಗೊಬ್ಬರಗಳಾದ ಸೆಣಬು ಅಥವಾ ಡಯಾಂಚ ಮತ್ತು ದ್ವಿದಳ ಧಾನ್ಯಗಳಾದ ಅಲಸಂದೆ, ಹೆಸರು, ಅವರೆ, ಹುರುಳಿ, ಉದ್ದು ಇತ್ಯಾದಿ ಬೆಳೆಗಳನ್ನು ಸೂಕ್ತ ಪ್ರದೇಶಗಳಲ್ಲಿ ಬಿತ್ತನೆ ಮಾಡುವುದು.
ನೀರು ಬರಿದಾಗಿರುವ ಕೆರೆಗಳಲ್ಲಿ ಗೋಡು ಮಣ್ಣನ್ನು ತೆಗೆದು ಭೂಮಿಗೆ ಸೇರಿಸುವುದರಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದು.ಮುಂಗಾರಿಗೆ ಸಂಬಂಧಿಸಿದಂತೆ ಅಗತ್ಯ ತಯಾರಿಗಳನ್ನು ನಡೆಸಲಾಗಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನು ಮಾಡಲಾಗಿದೆ ಎಂದು ಸಹಾಯಕ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.