ಕಾಕಿನಾಡ: ಮೂವತ್ತರ ಹರೆಯಕ್ಕೆ ಜೀವನದ ಉತ್ಸಾಹ ಕಳೆದುಕೊಳ್ಳುವ ಕೆಲವರ ನಡುವೆ ಆಂಧ್ರ ಪ್ರದೇಶದ ಹಿರಿಯ ಮಹಿಳೆಯೊಬ್ಬರು ತಮ್ಮ 52ನೇ ವಯಸ್ಸಿನಲ್ಲಿ ಸಮುದ್ರದಲ್ಲಿ ಬರೊಬ್ಬರಿ 150ಕಿ.ಮೀ ಈಜಿ ದಾಖಲೆ ನಿರ್ಮಿಸಿದ್ದಾರೆ.
ಹೌದು.. ಕಾಕಿನಾಡ ಜಿಲ್ಲೆಯ ಮಹಿಳೆಯೊಬ್ಬರು ತಮ್ಮ 52ನೇ ವಯಸ್ಸಿನಲ್ಲೂ ಜೀವನದ ಅತಿ ದೊಡ್ಡ ಸಾಹಸ ಮಾಡಿದ್ದು, ಬಂಗಾಳ ಕೊಲ್ಲಿಯಲ್ಲಿ ಬರೊಬ್ಬರಿ 150 ಕಿಲೋಮೀಟರ್ ದೂರ ಈಜಿ ದಾಖಲೆ ಬರೆದಿದ್ದಾರೆ. ವಿಶಾಖಪಟ್ಟಣಂನಿಂದ ಆರಂಭವಾದ ಅವರ ಈಜಿನ ಸಾಹಸಗಾಥೆ ಅವರ ಹುಟ್ಟೂರಾದ ಕಾಕಿನಾಡದಲ್ಲಿ ಅಂದರೆ ಸುಮಾರು 150 ಕಿ.ಮೀ ದೂರದಲ್ಲಿ ಕೊನೆಗೊಂಡಿದೆ.
ಕೋರಮಂಡಲ್ ಒಡಿಸ್ಸಿ ಸಾಗರ ಈಜು ಸಂಸ್ಥೆಯ ಆಶ್ರಯದಲ್ಲಿ ಕಳೆದ ತಿಂಗಳು 28ರಂದು ವಿಶಾಖಪಟ್ಟಣಂ ಕರಾವಳಿಯಿಂದ ಕಾಕಿನಾಡ ಕರಾವಳಿವರೆಗೆ ಯಾತ್ರೆ ಆರಂಭಿಸಲಾಗಿತ್ತು. ಈ ಯಾತ್ರೆಯಲ್ಲಿ ಶಾಮಲಾ ಅವರು 2024ರ ಡಿಸೆಂಬರ್ 28ರಂದು ತಮ್ಮ ಈಜಿನ ಜರ್ನಿಯನ್ನು ವಿಶಾಖಪಟ್ಟಣಂನ ಆರ್ ಕೆ ಬೀಚ್ ನಲ್ಲಿ ಆರಂಭಿಸಿದ್ದರು. ಸಮುದ್ರದಲ್ಲಿ ದಿನಕ್ಕೆ 30 ಕಿ.ಮೀ.ನಂತೆ 150 ಕಿ.ಮೀ ದೂರ ಈಜಿ ಜನವರಿ 4ರಂದು ಆಂಧ್ರ ಪ್ರದೇಶದ ಕಾಕಿನಾಡದ ಸೂರ್ಯರಾವ್ ಬೀಚ್ ತಲುಪಿದ್ದಾರೆ. ಅಚ್ಚರಿ ಎಂದರೆ ಶಾಮಲಾ ಅವರು ಸಮುದ್ರದಲ್ಲೇ ಈಜುತ್ತಾ ಹೊಸ ವರ್ಷಾಚರಣೆ ಮಾಡಿದ್ದು ವಿಶೇಷ.
ಇನ್ನು ತಮ್ಮ ಹುಟ್ಟೂರು ಕಾಕಿನಾಡಕ್ಕೆ ಈಜಿನ ಮೂಲಕ ಬಂದ ಶಾಮಲಾ ಅವರನ್ನು ಸ್ಥಳೀಯರು ಅದ್ಧೂರಿಯಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಾಕಿನಾಡ ಸೀಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಿಇಒ ಮುರಳೀಧರ್, ಸ್ಥಳೀಯ ಶಾಸಕ ಚಿನ್ನರಾಜಪ್ಪ, ಕಾಕಿನಾಡ ಆಯುಕ್ತೆ ಭಾವನಾ ಮತ್ತಿತರರು ಉಪಸ್ಥಿತರಿದ್ದು ಶಾಮಲಾ ಅವರಿಗೆ ಅಭಿನಂದನೆ ಸಲ್ಲಿಸಿದರು.
ಶಾಮಲಾ ಸಾಹಸಕ್ಕೆ ಸಿಎಂ ನಾಯ್ಡು ಫಿದಾ
ಇನ್ನು ಶಾಮಲಾ ಅವರ ಈಜಿನ ಸಾಹಸಕ್ಕೆ ಸ್ವತಃ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಕೂಡ ಫಿದಾ ಆಗಿದ್ದು, ಈ ಕುರಿತು ವಿಡಿಯೋ ಸಹಿತ ಟ್ವೀಟ್ ಮಾಡಿರುವ ಅವರು, ’52ನೇ ವಯಸ್ಸಿನಲ್ಲಿ, ಗೋಲಿ ಶ್ಯಾಮಲಾ ಅವರು ವಿಶಾಖಪಟ್ಟಣಂನಿಂದ ಕಾಕಿನಾಡಕ್ಕೆ 150 ಕಿ.ಮೀ ಈಜಿರುವುದು ಅಸಾಧಾರಣ ಧೈರ್ಯ ಮತ್ತು ದೃಢಸಂಕಲ್ಪದ ಕಥೆಯಾಗಿದೆ. ಆರು ದಿನಗಳಲ್ಲಿ, ಆಂಧ್ರ ಪ್ರದೇಶದ ಈ ಮಗಳು ತನ್ನ ಪ್ರಯಾಣದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿ ಅಂತಿಮವಾಗಿ ಧೈರ್ಯದಿಂದ ಜಯಗಳಿಸಿದ್ದಾರೆ. ಅವರ ಪ್ರಯಾಣವು ನಾರಿ ಶಕ್ತಿಯ ಉಜ್ವಲ ಉದಾಹರಣೆಯಷ್ಟೇ ಅಲ್ಲ, ಮಾನವ ಚೈತನ್ಯದ ಶಕ್ತಿಯ ಪ್ರತಿಬಿಂಬವಾಗಿದೆ. ತಮ್ಮ ಈ ಸಾಹಸದ ಮೂಲಕ ಅಮೂಲ್ಯ ಸಮುದ್ರ ಜೀವಿಗಳನ್ನು ರಕ್ಷಿಸುವ ಅಗತ್ಯವನ್ನು ಅವರು ಒತ್ತಿಹೇಳಿದ್ದಾರೆ. ಅವರ ಶ್ಲಾಘನೀಯ ಸಾಧನೆಯ ಮೂಲಕ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ್ದಾರೆ. ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.