ಬೆಂಗಳೂರು: ಬೆಂಗಳೂರು ಪೊಲೀಸರು ಹಾಗೂ ಸಿಸಿಬಿ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಐವರು ಆರೋಪಿಗಳನ್ನು ಬಂಧಿಸಿದ್ದು, ಸುಮಾರು ರೂ.6 ಕೋಟಿ ಮೊತ್ತದ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಅಕ್ರಮ ಡ್ರಗ್ಸ್ ಸಾಗಣೆ ಕುರಿತು ಅನುಮಾನ ಹೊಂದಿದ್ದ ಪೊಲೀಸರು ಮೊದಲಿಗೆ ಸೊಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಸಿದ್ದು, ಇಬ್ಬರು ವಿದೇಶಿ ಪೆಡ್ಲರ್ ಗಳಿಂದ ಮಾದಕ ವಸ್ತುಗಳಾದ MDMA ಕ್ರಿಸ್ಟಲ್ಸ್, ಕೊಕೇನ್ ಮತ್ತು ಎಕ್ಸೆಟೆಸಿ ಪಿಲ್ಸ್ ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್,1.5 ಕೆಜಿ MDMA ಕ್ರಿಸ್ಟಲ್ಸ್, 202 ಗ್ರಾಂ ಕೊಕೇನ್ ಮತ್ತು 12 ಎಕ್ಸ್ ಟೆಸಿ ಪಿಲ್ಸ್, ಎರಡು ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದೇವೆ. ಈ ಡ್ರಗ್ಸ್ ಒಟ್ಟಾರೇ ರೂ. 3 ಕೋಟಿ ಮೊತ್ತದ್ದಾಗಿದೆ. ಸಿಸಿಬಿಗೆ ದೊರೆತ ಖಚಿತ ಮಾಹಿತಿ ಆಧಾರದ ಮೇಲೆ ಇಬ್ಬರು ವಿದೇಶಿಗರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ವಿಚಾರಣೆ ವೇಳೆ ವೈದ್ಯಕೀಯ ವೀಸಾದಲ್ಲಿ ಐದು ವರ್ಷದ ಹಿಂದೆ ಭಾರತಕ್ಕೆ ಅವರು ಬಂದಿರುವುದು ತಿಳಿದುಬಂದಿದೆ. ಅವರು ಮುಂಬೈ ಮತ್ತು ದೆಹಲಿಯಲ್ಲಿ ಡ್ರಗ್ಸ್ ಮಾರಾಟದಲ್ಲಿ ತೊಡಗಿಸಿಕೊಂಡಿದ್ದರು. ಮುಂಬೈನಲ್ಲಿ ಅವರ ವಿರುದ್ಧ ದೂರು ದಾಖಲಾದ ನಂತರ ಈಗ ಬೆಂಗಳೂರಿನಲ್ಲಿ ನಿಷೇಧಿತ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಅವರು ವಿವರಿಸಿದರು.
ಎರಡನೇ ಕಾರ್ಯಾಚರಣೆಯಲ್ಲಿ ಮೂವರನ್ನು ಬಂಧಿಸಿರುವ ಪೊಲೀಸರು ಸುಮಾರು ರೂ. 3.25 ಕೋಟಿ ಮೊತ್ತದ 318 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಮಾದಕ ವಸ್ತುವನ್ನು ಓಡಿಶಾ ಮತ್ತು ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದರು ಎಂಬುದು ವರದಿಯಾಗಿದೆ.
ಖಚಿತ ಮಾಹಿತಿ ಮೇರೆಗೆ ಗೋವಿಂದಪುರ ಪೊಲೀಸರು, ಕಾರೊಂದರಲ್ಲಿ ಡ್ರಗ್ಸ್ ಸಾಗಟ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ಕಾರನ್ನು ಕೂಡಾ ಬಂಧಿಸಲಾಗಿದೆ.ಪ್ರಮುಖ ಆರೋಪಿ ಕೇರಳ ಮೂಲದವನಾಗಿದ್ದು, ಆತನ ವಿರುದ್ಧ ದರೋಡೆ, ಕೊಲೆ ಯತ್ನ, ಮಾದಕ ವಸ್ತು ಸಾಗಟ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.