ತುಮಕೂರು: ದಿನದಿಂದ ದಿನಕ್ಕೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ತುಮಕೂರಿನ ಸರ್ಕಾರಿ ನೌಕರರೊಬ್ಬರನ್ನು ಆರು ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿ ಬರೋಬ್ಬರಿ 19 ಲಕ್ಷ ರೂ.ಗಳನ್ನು ದೋಚಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ತುಮಕೂರಿನ ಉಪ್ಪಾರಹಳ್ಳಿಯಲ್ಲಿ ವಾಸವಾಗಿರುವ ಸರ್ಕಾರಿ ನೌಕರ ಬಿಎಸ್ ನಾಗಭೂಷಣ್ ಎಂಬುವವರು ಸೈಬರ್ ವಂಚನೆಗೆ ಒಳಗಾಗಿದ್ದು, ಸೈಬರ್ ಪೊಲೀಸ್ ವಿಭಾಗಕ್ಕೆ ದೂರು ನೀಡಿದ್ದಾರೆ.
ಪೊಲೀಸರ ಪ್ರಕಾರ, ವಂಚಕನು ಸಂತ್ರಸ್ತ ಅಧಿಕಾರಿಗೆ ಫೋನ್ ಕರೆ ಮಾಡಿ ಮುಂಬೈ ಕ್ರೈಂ ಬ್ರಾಂಚ್ನ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದ್ದಾನೆ.
ಸಂತ್ರಸ್ತರ ಹೆಸರಿನಲ್ಲಿ ಮತ್ತೊಂದು ಸಿಮ್ ಕಾರ್ಡ್ ಇದ್ದು, ಆ ಸಿಮ್ ಕಾರ್ಡ್ ಅನ್ನು ಜನರಿಗೆ ಕಿರುಕುಳ ನೀಡಲು ಬಳಸಲಾಗುತ್ತಿದೆ. ಹೀಗಾಗಿ, ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಮ್ಮ ಆಸ್ತಿಯನ್ನು ವಶಪಡಿಸಿಕೊಳ್ಳಬಹುದು ಮತ್ತು ನಿಮ್ಮನ್ನೂ ಬಂಧಿಸುವ ಸಾಧ್ಯತೆಯಿದೆ ಎಂದು ಬೆದರಿಕೆಯೊಡ್ಡಿದ್ದಾನೆ.
ನಂತರ, ಆರೋಪಿಯು ನಾಗಭೂಷಣ್ ಅವರಿಗೆ ವಿಡಿಯೋ ಕರೆ ಮಾಡಿದ್ದಾನೆ ಮತ್ತು ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಅಲ್ಲದೆ, ಹೆಚ್ಚಿನ ಬೆದರಿಕೆಯೊಡ್ಡಿದ್ದು, ಈ ವಿಷಯವನ್ನು ಯಾರಿಗೂ ತಿಳಿಸದಂತೆ ಹೇಳಿದ್ದಾನೆ. ಆರೋಪಿ ಬೆಳಗ್ಗೆ 8.30ಕ್ಕೆ ಕರೆ ಮಾಡಿದ್ದಾನೆ ಮತ್ತು ವಿಚಾರಣೆಯ ನೆಪವೊಡ್ಡಿ ವಿಡಿಯೋ ಕಾನ್ಫರೆನ್ಸ್ ಕರೆಯಲ್ಲಿ ಆರು ಗಂಟೆಗಳ ಕಾಲ ಸಂತ್ರಸ್ತರನ್ನು ತೊಡಗಿಸಿಕೊಂಡಿದ್ದಾನೆ. ಅವರ ಬ್ಯಾಂಕ್ ಖಾತೆಗಳು ಮತ್ತು ಠೇವಣಿಗಳ ಬಗ್ಗೆ ವಿಚಾರಿಸಿದಾಗ ಸಂತ್ರಸ್ತರು ತಮ್ಮ ಪತ್ನಿ ಹೆಸರಿನಲ್ಲಿ ಎಫ್ಡಿ ಇಟ್ಟಿರುವ ಬಗ್ಗೆ ಹೇಳಿದ್ದಾರೆ.
ವಂಚಕರು ನಂತರ ತಾವು ನೀಡಿದ ಇತರ ಬ್ಯಾಂಕ್ ಖಾತೆಗಳಿಗೆ ಮೊತ್ತವನ್ನು ವರ್ಗಾಯಿಸುವಂತೆ ಹೇಳಿದ್ದಾರೆ ಮತ್ತು ತನಿಖೆ ಪೂರ್ಣಗೊಂಡ ನಂತರ ಸಂಪೂರ್ಣ ಮೊತ್ತವನ್ನು ಹಿಂತಿರುಗಿಸಲಾಗುವುದು ಎಂದಿದ್ದಾರೆ.
ಸಂತ್ರಸ್ತರು ಆರ್ಟಿಜಿಎಸ್ ಮೂಲಕ ವಂಚಕರ ಖಾತೆಗೆ 19 ಲಕ್ಷ ರೂ. ಹಣವನ್ನು ವರ್ಗಾಯಿಸಿದ್ದಾರೆ. ನಂತರ ಆರೋಪಿ ನಿಮ್ಮ ಖಾತೆಗಳನ್ನು ಪರಿಶೀಲಿಸುತ್ತೇವೆ ಮತ್ತು 30 ನಿಮಿಷಗಳಲ್ಲಿ ನಿಮ್ಮನ್ನು ಮತ್ತೆ ಸಂಪರ್ಕಿಸುತ್ತೇವೆ ಎಂದು ಹೇಳಿ ಕರೆಯನ್ನು ಕಡಿತಗೊಳಿಸಿದ್ದಾರೆ ಮತ್ತು ನಂತರ ಮತ್ತೆ ಕರೆ ಮಾಡಿಲ್ಲ.
ನಂತರ ಸಂತ್ರಸ್ತರು ಪೊಲೀಸರನ್ನು ಸಂಪರ್ಕಿಸಿ ಈ ಬಗ್ಗೆ ದೂರು ನೀಡಿದ್ದಾರೆ.