ಬೆಂಗಳೂರು: ಬೆಂಗಳೂರಿನ ಜಯನಗರದ ಎಂಟನೇ ಬ್ಲಾಕ್ನಲ್ಲಿರುವ ಸುಮಾರು 60 ಕೋಟಿ ರೂಪಾಯಿ ಮೌಲ್ಯದ ಸಿಎ (ಸಿವಿಕ್ ಅಮೆನಿಟಿ) ಸೈಟ್ ಅನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೇವಲ 2 ಕೋಟಿ ರೂಪಾಯಿಗೆ ಮಾರಾಟ ಮಾಡಿರುವ ಬಗ್ಗೆ ವರದಿಯಾಗಿದೆ. ಇದೀಗ ಈ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಬಿಡಿಎಯನ್ನು ತರಾಟೆಗೆ ತೆಗೆದುಕೊಂಡಿದ್ದು, ಇದೊಂಥರ ಹಗಲು ದರೋಡೆ ಎಂದು ಟೀಕಿಸಿದ್ದಾರೆ.
ಅಕ್ರಮದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಪ್ರಕಟಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಜಯನಗರದ ಪ್ರಮುಖ ಸೈಟ್ ಒಂದನ್ನು ತೀರಾ ಕಡಿಮೆ ಬೆಲೆಗೆ ಬಿಡಿಎ ಮಾರಾಟ ಮಾಡಿರುವ ಬಗ್ಗೆ ಡೆಕ್ಕನ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ. ಜಯನಗರ 8ನೇ ಬ್ಲಾಕ್ನಲ್ಲಿರುವ ಈ 8,000 ಚದರ ಅಡಿ ಕಾರ್ನರ್ ಪ್ಲಾಟ್ ಅನ್ನು ಮೂಲತಃ ನಮ್ಮ ಸಮುದಾಯದ ಆರೋಗ್ಯ ಅಗತ್ಯಗಳನ್ನು ಪೂರೈಸುವ ನರ್ಸಿಂಗ್ ಹೋಮ್ಗಾಗಿ ಮಂಜೂರು ಮಾಡಲಾಗಿತ್ತು ಎಂದು ಹೇಳಿದ್ದಾರೆ.
45 ವರ್ಷಗಳ ಕಾಲ, ಅಂದರೆ 1973 ರಿಂದ 2018 ರವರೆಗೆ, ಬಿಡಿಎ ಇದನ್ನು ಸಿಎ ಸೈಟ್ ಎಂದು ಕಾಯ್ದುಕೊಂಡು ಬಂದಿತ್ತು. ಅಲ್ಲದೆ, ಆ ಸೈಟ್ ಅನ್ನು ಖಾಸಗಿ ಆಸ್ತಿಯಾಗಿ ಕನ್ವರ್ಟ್ ಮಾಡುವ ಪ್ರಯತ್ನಗಳನ್ನೂ ತಿರಸ್ಕರಿಸಿತ್ತು. ನಂತರ ಇದ್ದಕ್ಕಿದ್ದಂತೆ 2018 ರಲ್ಲಿ, ಬಿಡಿಎ ಯುಟರ್ನ್ ತೆಗೆದುಕೊಂಡು ಅದನ್ನು ಸಿಎ ಸೈಟ್ ಅಲ್ಲ ಎಂದು ಘೋಷಿಸಿತ್ತು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಈ ಸೈಟ್ ಮೌಲ್ಯ ಮಾರುಕಟ್ಟೆಯಲ್ಲಿ 60 ಕೋಟಿ ರೂ.ಗಳಾಗಿವೆ. ಖುದ್ದು ಸರ್ಕಾರದ ಮಾರ್ಗದರ್ಶನ ಪ್ರಕಾರ, ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿದರೂ ಇದರ ಮೌಲ್ಯವು 23.2 ಕೋಟಿ ರೂ. ಆಗಿದೆ. ಬಿಡಿಎ ಅದನ್ನು ಕೇವಲ 2 ಕೋಟಿ ರೂ.ಗಳಿಗೆ ಮಾರಾಟ ಮಾಡಿದೆ. ಅಂದರೆ ಮಾರುಕಟ್ಟೆ ಮೌಲ್ಯದ ಕೇವಲ ಶೇ 10 ರಷ್ಟು ಮೌಲ್ಯ ಇದಾಗಿದೆ. ಇದು ಸಾರ್ವಜನಿಕ ಭೂಮಿ ಮತ್ತು ಸಮುದಾಯದ ಸಂಪನ್ಮೂಲಗಳ ಹಗಲು ದರೋಡೆಗೆ ಕಡಿಮೆಯಲ್ಲ ಎಂದು ಸೂರ್ಯ ಕಿಡಿ ಕಾರಿದ್ದಾರೆ.