ದೊಡ್ಡಬಳ್ಳಾಪುರ: ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲು ಹೊರಟಿರುವ ಭೂಮಿಗೆ ಸೂಕ್ತ ಪರಿಹಾರ ನೀಡದ ಹೊರತು ಭೂಮಿಯನ್ನು ಬಿಡುವ ಪ್ರಶ್ನೆಯೇ ಇಲ್ಲ, ಏಳು ದಿನಗಳ ಗಡುವು ಪಡೆದಿರುವ ಅಧಿಕಾರಿಗಳು ನಮ್ಮ ಭೂಮಿಗೆ ಸೂಕ್ತ ದರ ನಿಗದಿ ಮಾಡದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲಾಗುವುದು ಎಂದು ಮಾಜಿ ಟಿಎಪಿಎಂಸಿಎಸ್ ಅಧ್ಯಕ್ಷರಾದ ಎಂ.ಆನಂದ್ ತಿಳಿಸಿದರು.
ತಾಲ್ಲೂಕಿನ ಕೊನಘಟ್ಟ ಗ್ರಾಮದ ಕಾಮನಬಂಡೆಯ ಸಮೀಪ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅವೈಜ್ಞಾನಿಕ ದರ ನಿಗದಿ ವಿರೋಧಿಸಿ ರೈತರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿಯು 68 ದಿನಗಳು ಕಳೆದಿವೆ ಆದರೂ ಸಹ ಯಾವುದೇ ರೀತಿಯ ಇತ್ಯರ್ಥ ಅಥವಾ ಪರಿಹಾರ ಸಿಕ್ಕಿಲ್ಲ, ಇದೇ ಕಾರಣದಿಂದ ಧರಣಿ ಸ್ಥಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಧಿಕಾರಿಗಳು ಫಲವತ್ತಾದ ನಮ್ಮ ಕೃಷಿ ಭೂಮಿಗೆ 2013 ರ ಭೂಸ್ವಾಧೀನ ಕಾಯ್ದೆ ಅನ್ವಯ ಸೂಕ್ತ ಪರಿಹಾರ ನಿಗದಿಪಡಿಸುವಲ್ಲಿ ವಿಫಲರಾಗಿದ್ದು. ಈ ಮೂಲಕ ಅಧಿಕಾರಿಗಳಿಗೆ ರೈತರು ನೀಡುತ್ತಿರುವ ಕೊನೆಯ ಎಚ್ಚರಿಕೆಯಾಗಿದೆ. ಅಧಿಕಾರಿಗಳು ನಮ್ಮ ಭೂಮಿಗೆ ಸಂಬಂಧಿಸಿದಂತೆ ದರ ನಿಗದಿ ಮಾಡಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೋಡಿಹಳ್ಳಿ, ಕೊನಘಟ್ಟ, ನಾಗದೇನಹಳ್ಳಿ ಮತ್ತು ಆದಿನಾರಾಯಣ ಹೊಸಹಳ್ಳಿಯ ರೈತರು ಚುನಾವಣೆ ಬಹಿಷ್ಕರಿಸಲು ಸರ್ವಾನುಮತದಿಂದ ನಿರ್ಧಾರ ಮಾಡಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ರಾಮಾಂಜಿನಪ್ಪ ಅವರು ಮಾತನಾಡಿ ಕೊನಘಟ್ಟ, ನಾಗದೇನಹಳ್ಳಿ, ಆದಿನಾರಾಯಣ ಹೊಸಹಳ್ಳಿ ಗ್ರಾಮಗಳಿಗೆ ಸೇರಿದ ರೈತರ 971 ಎಕರೆ ಭೂಮಿಯ ಸ್ವಾಧೀನಕ್ಕೆ ಕೆಐಎಡಿಬಿ ಮುಂದಾಗಿದ್ದು 2013 ರ ಭೂ ಸ್ವಾಧೀನ ಕಾಯ್ದೆಯ ಮಾನದಂಡದಂತೆ 1:4 ರಂತೆ ಬೆಲೆ ನಿಗದಿ ಮಾಡುವ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ, ರೈತರ ಫಲವತ್ತಾದ ಭೂಮಿಯನ್ನು ಕಬಳಿಸುತ್ತಿರುವ ಕೆಐಎಡಿಬಿ ಅಧಿಕಾರಿಗಳಿಗೆ ಸೂಕ್ತ ದರ ನಿಗದಿ ಪಡಿಸಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಕೆಲ ಏಜೆಂಟ್ಗಳ ಮೂಲಕ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ಏಜೆಂಟ್ ಗಳ ಸಮಸ್ಯೆಯಿಂದಾಗಿ 704 ರೈತರ ಜೀವನ ಹಾಳಾಗುತ್ತಿದೆ. ಸರ್ಕಾರ ರೈತರ ಪರ ನಿಲುವು ತೆಗೆದುಕೊಳ್ಳಬೇಕಿದೆ ಎಂದು ಒತ್ತಾಯಿಸಿದರು.
ರೈತ ಹಾಗೂ ನಿವೃತ್ತ ಶಿಕ್ಷಕ ಕೃಷ್ಣಪ್ಪ ಮಾತನಾಡಿ ಕೆಐಎಡಿಬಿ ಅಧಿಕಾರಿಗಳು ಕೆಲವು ಏಜೆಂಟರ ಮೂಲಕ ರೈತರ ಭೂ ದಾಖಲಾತಿಗಳನ್ನು ಸಂಗ್ರಹ ಮಾಡಿಸಿದ್ದು. ಈ ಕುರಿತು ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಅಂತಹ ರೈತರಿಗೆ ಸೂಕ್ತ ದರ ನಿಗದಿ ಮಾಡದೇ ಹಣ ಬಿಡುಗಡೆ ಮಾಡದಂತೆ ಒತ್ತಾಯ ಮಾಡಲಾಗಿದೆ. ಈ ಕುರಿತು ಅಧಿಕಾರಿಗಳು ಸಾಕಾರಾತ್ಮಕವಾಗಿ ಸ್ಪಂದಿಸಿದ್ದು ಮಾರ್ಚ್ 7ರವರೆಗೂ ಗಡುವು ಪಡೆದಿದ್ದಾರೆ..ರೈತರ ಭೂಮಿಗೆ ಸೂಕ್ತ ದರ ನಿಗದಿ ಕುರಿತು ಮುಂದಿನ 7 ದಿನಗಳಲ್ಲಿ ಮತ್ತೊಂದು ಸಭೆ ಕರೆ ಕರೆಯುವುದಾಗಿ ತಿಳಿಸಿದ್ದಾರೆ. ಅಧಿಕಾರಿಗಳು ರೈತರ ಪರ ನಿರ್ಧಾರ ಕೈಗೊಳ್ಳುವ ಭರವಸೆ ಇದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ರೈತ ಮುಖಂಡರಾದ ನರಸಿಂಹ ಮೂರ್ತಿ, ರಾಮಾಂಜಿನಪ್ಪ, ವೆಂಕಟೇಶ್, ರಮೇಶ್, ಮಹೇಶ್, ನಾಗರಾಜು, ಕೃಷ್ಣಪ್ಪ ಕೋಡಿಹಳ್ಳಿ, ಬೈರೇಗೌಡ ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.