ದಾವಣಗೆರೆ: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಮರಿ ಸಾಕಾಣಿಕೆಗೆ ಫಾರಂ ಪಾಂಡ್ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ ಜಿಲ್ಲೆಯ ರೈತರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು.
ಜನವರಿ 8 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಫಲಾನುಭವಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು ಮತ್ಸ್ಯ ಸಂಪದ ಯೋಜನೆಯಡಿ ಪ್ರತಿ ಹೆಕ್ಟೇರ್ಗೆ ಮೀನು ಕೃಷಿಗಾಗಿ ರೂ.7 ಲಕ್ಷ ಘಟಕ ವೆಚ್ಚ ನಿಗದಿ ಮಾಡಲಾಗಿದೆ. ಈ ಯೋಜನೆಯಡಿ ಸೌಲಭ್ಯ ಪಡೆಯಲು ಕೆರೆ ಅಥವಾ ಅಚ್ಚುಕಟ್ಟು ಪ್ರದೇಶದಲ್ಲಿ ಜಮೀನು ಹೊಂದಿರಬೇಕು. ಸಾಮಾನ್ಯ ವರ್ಗದವರಿಗೆ ಘಟಕ ವೆಚ್ಚದಲ್ಲಿ ಶೇ 40 ರಷ್ಟು, ಪ.ಜಾ, ಪ.ಪಂ ಹಾಗೂ ಮಹಿಳಾ ಫಲಾನುಭವಿಗಳಿಗೆ ಶೇ 60 ರಷ್ಟು ಸಬ್ಸೀಡಿ ನೀಡಲಾಗುತ್ತದೆ.
ದಾವಣಗೆರೆ ಜಿಲ್ಲೆಗೆ ಒಟ್ಟು 25 ಎಕರೆಯವರೆಗೆ ಮತ್ಸ್ಯ ಸಂಪದ ಯೋಜನೆಯಡಿ ಮೀನು ಕೃಷಿಗೆ ಅವಕಾಶ ಇದ್ದು ಈಗ 10 ಜನರು ಮಾತ್ರ ಅರ್ಜಿ ಸಲ್ಲಿಸಿದ್ದು 4.2 ಹೆಕ್ಟೇರ್ಗೆ ಅನುಮತಿ ನೀಡಲಾಗಿದೆ.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಶಾರದಮ್ಮ, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಡಿ.ಅಣ್ಣಪ್ಪಸ್ವಾಮಿ ಉಪಸ್ಥಿತರಿದ್ದರು.