ನಾರಾಯಣಪುರ: ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಏಳು ನಕ್ಸಲೀಯರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಯೋಧರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಓರ್ಚಾ ಪ್ರದೇಶದ ಗೋಬೆಲ್ ಮತ್ತು ತುಲ್ತುಲಿ ಗ್ರಾಮಗಳ ಸಮೀಪದ ಕಾಡಿನಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಭದ್ರತಾ ಸಿಬ್ಬಂದಿಯ ಜಂಟಿ ತಂಡ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾರಾಯಣಪುರ, ಕೊಂಡಗಾಂವ್, ದಾಂತೇವಾಡ ಮತ್ತು ಬಸ್ತಾರ್ ಜಿಲ್ಲೆಗಳ ಪೊಲೀಸ್ ಜಿಲ್ಲಾ ಮೀಸಲು ಗಾರ್ಡ್ಗೆ ಸೇರಿದ ಸಿಬ್ಬಂದಿ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ) 45ನೇ ಬೆಟಾಲಿಯನ್ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಎನ್ ಕೌಂಟರ್ ನಂತರ, ಸಮವಸ್ತ್ರದಲ್ಲಿದ್ದ ಏಳು ನಕ್ಸಲರ ದೇಹಗಳು ಮತ್ತು ಕೆಲವು ಶಸ್ತ್ರಾಸ್ತ್ರಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗುಂಡಿನ ಕಾಳಗದಲ್ಲಿ ಮೂವರು ಯೋಧರು ಗಾಯಗೊಂಡಿದ್ದು, ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಹತ್ಯೆಯಾದ ನಕ್ಸಲೀಯರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.