ಕಾಬೂಲ್: ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ನಡುವಿನ ಸಂಘರ್ಷ ಮುಂದುವರೆದಿದೆ. ಕದನ ವಿರಾಮ ಉಲ್ಲಂಘಿಸಿ ತಡರಾತ್ರಿ ಪಾಕ್ ನಡೆಸಿದ
ಮೈಮಾನಿಕ ದಾಳಿಯಲ್ಲಿ ಅಫ್ಘಾನಿಸ್ತಾನದ ಮೂವರು ಕ್ರಿಕೆಟಿಗರು ಹಾಗೂ ಐವರು ನಾಗರಿಕರು ಸಾವನ್ನಪ್ಪಿದ್ದಾರೆ. ಅಫ್ಘಾನಿಸ್ತಾನದ ಕ್ರಿಕೆಟ್ ಮಂಡಳಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸ್ಥಳೀಯ ಕ್ರಿಕೆಟಿಗರು ಮೃತಪಟ್ಟಿರುವುದನ್ನ ಖಚಿತಪಡಿಸಿ, ಶೋಕವ್ಯಕ್ತಪಡಿಸಿದೆ.
ಪಾಕ್ ದಾಳಿಗೆ ಮೃತಪಟ್ಟ ಕ್ರಿಕೆಟಿಗರನ್ನು ಕಬೀರ್, ಸಿಬ್ಬತುಲ್ಲಾ ಮತ್ತು ಹರೂನ್ ಎಂದು ಗುರುತಿಸಲಾಗಿದೆ. ಹೃದಯ ವಿದ್ರಾವಕ ಘಟನೆಯಲ್ಲಿ ಮೂವರು
ಆಟಗಾರರು ಹುತಾತ್ಮರಾಗಿದ್ದಾರೆ. ಇತರ ೭ ಮಂದಿ ಗಾಯಗೊಂಡಿದ್ದಾರೆ. ಸೌಹಾರ್ದ ಪಂದ್ಯದಲ್ಲಿ ಭಾಗವಹಿಸಲು ಅಫ್ಘಾನ್ ಕ್ಲಬ್ ಮಟ್ಟದ ಯುವ
ಆಟಗಾರರು ಪಾಕಿಸ್ತಾನ ಗಡಿಯಲ್ಲಿರುವ ಪೂರ್ವ ಪಕ್ತಿಕಾ ಪ್ರಾಂತ್ಯದ ಉರ್ಗುನ್ನಿಂದ ಶರಾನಾಗೆ ಪ್ರಯಾಣಿಸಿದ್ದರು. ಈ ವೇಳೆ ದಾಳಿ ನಡೆದಿದ್ದು,
ಇದರಿಂದ ಮೂವರು ಕ್ರಿಕೆಟಿಗರು ಹಾಗೂ ಐವರು ನಾಗರಿಕರು ಸಾವನ್ನಪ್ಪಿದ್ದು, ಇನ್ನು ಕೆಲವರು ಗಾಯಗೊಂಡಿದ್ದಾರೆ ಎಂದು ಮಾಹಿತಿ
ಹಂಚಿಕೊಂಡಿದೆ.
ಈ ದಾಳಿ ವಿರುದ್ಧ ಅಫ್ಘಾನಿಸ್ತಾನ ಕ್ರಿಕೆಟಿಗರು ಧ್ವನಿಯೆತ್ತಿದ್ದು, ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ತಡರಾತ್ರಿ ನಡೆದ ದಾಳಿಯಲ್ಲಿ ಮೂವರು ಕ್ರಿಕೆಟಿಗರು ಸಾವನ್ನಪ್ಪಿದ ನಂತರ ಅಫ್ಘಾನಿಸ್ತಾನವು ಪಾಕಿಸ್ತಾನದೊಂದಿಗೆ ನವೆಂಬರ್ನಲ್ಲಿ
ನಿಗದಿಯಾಗಿದ್ದ ಮೂರು ರಾಷ್ಟ್ರಗಳ ಟಿ೨೦ ಸರಣಿಯನ್ನೇ ರದ್ದುಗೊಳಿಸಿದೆ. ಪಾಕಿಸ್ತಾನದ ವಾಯುದಾಳಿಯನ್ನು ಅಫ್ಘಾನ್ ಕ್ರಿಕೆಟಿಗ ರಶೀದ್ ಖಾನ್ ತೀವ್ರವಾಗಿ ಖಂಡಿಸಿದ್ದಾರೆ. ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ದಾಳಿಯಲ್ಲಿ ಮೃತರಾದ ನಾಗರಿಕರು, ಕ್ರಿಕೆಟಿಗರಿಗೆ ಸಂತಾಪ ಸೂಚಿಸಿದ್ದಾರೆ.
ನಾಗರಿಕರ ಸಾವು ನನಗೆ ತೀವ್ರ ದುಃಖ ತಂದಿದೆ. ವಿಶ್ವ ವೇದಿಕೆಯಲ್ಲಿ ತಮ್ಮ ರಾಷ್ಟ್ರವನ್ನು ಪ್ರತಿನಿಧಿಸುವ ಕನಸು ಕಂಡಿದ್ದ ಮಹಿಳೆಯರು, ಮಕ್ಕಳು ಮತ್ತು ಮಹತ್ವಾಕಾಂಕ್ಷಿ ಯುವ ಕ್ರಿಕೆಟಿಗರ ಪ್ರಾಣವನ್ನು ಬಲಿ ತೆಗೆದುಕೊಂಡ ದುರಂತ ಇದು. ನಾಗರಿಕ ಮೂಲಸೌಕರ್ಯ ಗುರಿಯಾಗಿಸಿಕೊಂಡಿರುವುದು ಸಂಪೂರ್ಣವಾಗಿ ಅನೈತಿಕ ಮತ್ತು ಅನಾಗರಿಕ ದಾಳಿ ನಡೆಸಲಾಗಿದೆ. ಅಮೂಲ್ಯ ಮುಗ್ಧ ಆತ್ಮಗಳು ದಾಳಿಯಲ್ಲಿ ಕಳೆದುಹೋಗಿವೆ. ಈ ನಿಟ್ಟಿನಲ್ಲಿ ಪಾಕಿಸ್ತಾನ
ವಿರುದ್ಧದ ಮುಂಬರುವ ಪಂದ್ಯಗಳಿಂದ ಹಿಂದೆ ಸರಿಯುವ ಎಸಿಬಿ ನಿರ್ಧಾರವನ್ನ ನಾನು ಸ್ವಾಗತಿಸುತ್ತೇನೆ. ಈ ಕಷ್ಟದ ಸಮಯದಲ್ಲಿ ನಾನು
ನಮ್ಮ ಜನರೊಂದಿಗೆ ನಿಲ್ಲುತ್ತೇನೆ, ನಮ್ಮ ರಾಷ್ಟ್ರೀಯಾ ಘನತೆಯು ಎಲ್ಲಕ್ಕಿಂತ ಮೊದಲು ಬರಬೇಕು ಎಂದು ಹೇಳಿದ್ದಾರೆ.