This is the title of the web page
This is the title of the web page

ರಾಮನಗರ ಜಿಲ್ಲೆಯಲ್ಲಿ ಶೇ.84.80 ರಷ್ಟು ಶಾಂತಿಯುತ ಮತದಾನ

ರಾಮನಗರ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಬುಧವಾರ ಶಾಂತಿಯುತವಾಗಿ ನಡೆದಿದ್ದು, ಅಂದಾಜು ಶೇ.84.80 ರಷ್ಟು ಮತದಾನ ಆಗಿದೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಮಾಗಡಿ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.86.18ರಷ್ಟು ಮತದಾನ ಹಾಗೂ ಅತಿ ಕಡಿಮೆ ರಾಮನಗರ ಕ್ಷೇತ್ರದಲ್ಲಿ ಶೇ.84.09ರಷ್ಟು ಮತದಾನವಾಗಿದೆ.

ಉಳಿದಂತೆ ಚನ್ನಪಟ್ಟಣ ಕ್ಷೇತ್ರದಲ್ಲಿ ಶೇ.84.44 ಕನಕಪುರ ಕ್ಷೇತ್ರದಲ್ಲಿ ಶೇ.84.50 ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ. ಬೆಳಗ್ಗೆ ಮತದಾನ ಪ್ರಕ್ರಿಯೆ ಆರಂಭ ಗೊಂಡಾಗ ಗ್ರಾಮೀಣ ಪ್ರದೇಶದ ಕೆಲ ಮತಗಟ್ಟೆಗಳಲ್ಲಷ್ಟೇ ಮತದಾರರು ಉತ್ಸಾಹದಿಂದ ಮತದಾನ ಮಾಡಿದರು. ಅನೇಕ ಕಡೆಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರ ಒತ್ತಡಕ್ಕೆ ಮಣಿದು ಮತದಾರರು ಮತ ಚಲಾಯಿಸಿದ ನಿದರ್ಶನಗಳಿವೆ.

ಬೆಳಗ್ಗೆ 9ಗಂಟೆ ವೇಳೆಗೆ ಜಿಲ್ಲೆಯಲ್ಲಿ ಶೇ 8.53ರಷ್ಟು ಮತದಾನ ನಡೆದಿತ್ತು. ಬೆಳಗ್ಗೆ 11 ಗಂಟೆ ವೇಳೆ ಮಾಗಡಿಯಲ್ಲಿ ಶೇ.23.51ರಷ್ಟು, ರಾಮನಗರದಲ್ಲಿ ಶೇ.23.14 ರಷ್ಟು, ಚನ್ನಪಟ್ಟಣದಲ್ಲಿ ಶೇ.21.87ರಷ್ಟು ಹಾಗೂ ಕನಕಪುರದಲ್ಲಿ ಶೇ.24.35ರಷ್ಟು ಸೇರಿ ಒಟ್ಟಾರೆ ಶೇ.23.21ರಷ್ಟು ಮತದಾನವಾಗಿತ್ತು.

ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ಮತದಾರರು ಮತಗಟ್ಟೆಗೆ ಬರುವ ಮನಸ್ಸು ಮಾಡಲಿಲ್ಲ. ಇದರಿಂದಾಗಿ ಮತದಾನ ಪ್ರಕ್ರಿಯೆ ಮಧ್ಯಾಹ್ನದವರೆಗೂ ಮಂದಗತಿಯಲ್ಲಿ ಸಾಗಿತ್ತು. ಬೆಳಗ್ಗೆ 11 ಗಂಟೆಗೆ ಶೇ.23.21ರಷ್ಟಿದ್ದ ಮತದಾನ ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.44.12ರಷ್ಟಾಗಿತ್ತು. ಮಧ್ಯಾಹ್ನ 3 ಗಂಟೆ ವೇಳೆಗೆ ಶೇ.62.27ರಷ್ಟು ಮತದಾನ ನಡೆದಿತ್ತು. ಬೆಳಗ್ಗೆ ತುಸು ನೀಸರವಾಗಿ ಮತದಾನ ಕಂಡು ಬಂದರೂ ಮಧ್ಯಾಹ್ನದ ನಂತರ ಚುರುಕುಗೊಂಡಿತು. ಸಂಜೆ 5.ಗಂಟೆ ವೇಳೆಗೆ ಶೇ.80.40ರಷ್ಟು ಮತದಾನವಾಗಿತ್ತು.