ಬೆಂಗಳೂರು / ಜೆರುಸಲೇಂ: ಮುಸ್ಲಿಮರ ಪವಿತ್ರ ಹಜ್ ಯಾತ್ರೆ ವೇಳೆ ಮೆಕ್ಕಾದಲ್ಲಿ ದಾಖಲಾದ 51.8 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ಮೃತಪಟ್ಟ 645 ಹಜ್ ಯಾತ್ರಾರ್ತಿಗಳ ಪೈಕಿ 90 ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆ.
ಇದರಲ್ಲಿ ಬೆಂಗಳೂರಿನ ಇಬ್ಬರು ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮೃತರು ಬಕ್ರೀದ್ ಹಬ್ಬದ ಹಿನ್ನೆಲೆ ಹಜ್ ಯಾತ್ರೆ ಕೈಗೊಂಡಿದ್ದರು.
ಮೆಕ್ಕಾಗಿಂತ 8 ಕಿಲೋಮೀಟರ್ ದೂರದ ಮೀನಾ ನಗರದಲ್ಲಿ ಬೆಂಗಳೂರಿನ ಇಬ್ಬರು ಯಾತ್ರಿಕರು ಸಾವನ್ನಪ್ಪಿದ್ದಾರೆ. ಮೃತರನ್ನು ಆರ್.ಟಿ ನಗರದ ಕೌಸರ್ ರುಕ್ಸಾನ (69) ಮತ್ತು ಫ್ರೆಝರ್ ಟೌನ್ನ ಮೊಹಮ್ಮದ್ ಇಲಿಯಾಸ್ (50) ಎಂದು ಗುರುತಿಸಲಾಗಿದೆ.
ಮೆಕ್ಕಾದಲ್ಲೇ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿದ್ದು, ಕರ್ನಾಟಕದ ಉಳಿದ ಯಾತ್ರಿಕರು ಸುರಕ್ಷಿತವಾಗಿದ್ದಾರೆ ಎಂದು ಹಜ್ ಕಮಿಟಿ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಜ್ ಖಾನ್ ಮಾಹಿತಿ ನೀಡಿದ್ದಾರೆ.ಈ ಬಾರಿ ಕರ್ನಾಟಕದಿಂದ 10,300 ಮಂದಿ ಹಜ್ ಯಾತ್ರೆಗೆ ತೆರಳಿದ್ದರು. ಇವರೊಂದಿಗೆ ರುಕ್ಸಾನ ಸಹ ತಮ್ಮ ಕುಟುಂಬದ ಜೊತೆಗೆ ಹಜ್ ಯಾತ್ರೆಗೆ ತೆರಳಿದ್ದರು ಎಂದು ಸರ್ಫರಾಜ್ ಖಾನ್ ತಿಳಿಸಿದ್ದಾರೆ.



