ಹೊಸಕೋಟೆ: ನಗರದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿನ ಅದ್ವಿತ್ಯ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.97.58ರಷ್ಟು ಫಲಿತಾಂಶ ಪಡೆದುಕೊಂಡಿದೆ.ವಾಣಿಜ್ಯ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳು ತಲಾ 588 (ಶೇ.98) ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 9ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಕೆಂಪರಾಜು ಮಾತನಾಡಿ ಕಳೆದ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಕಾಲೇಜು ಶೇ.97 ಫಲಿತಾಂಶ ಪಡೆದುಕೊಂಡಿದ್ದು, ಈ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕ ವೃಂದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಕಾಲೇಜಿನ ಪ್ರಿನ್ಸಿಪಾಲ್ ಮೋಹನ್ ಮಾತನಾಡಿ ವಿದ್ಯಾರ್ಥಿಗಳು ಕಠಿಣಶ್ರಮವಹಿಸಿ ಜ್ಞಾನಾರ್ಜನೆ ಮಾಡಿದರೆಗುರಿ ತಲುಪಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿ ಪೋಷಕರ ಕನಸನ್ನು ನನಸಾಗಿಸಿ ಅವರ ಗೌರವ ಉಳಿಸಲು ಶ್ರಮಿಸಬೇಕು. ಮುಂದಿನ ಶೈಕ್ಷಣಿಕ ಹಂತದಲ್ಲಿಯೂ ಸಹ ಇಂತಹುದೇ ಸಾಧನೆಯನ್ನು ಮಾಡುವ ಮೂಲಕ ಸಮಾಜದಲ್ಲಿ ಗೌರವ ಪಡೆಯಬೇಕು ಎಂದರು.
ಕಾಲೇಜಿನಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಒಟ್ಟು 202 ವಿದ್ಯಾರ್ಥಿಗಳಲ್ಲಿ 67 ಅತ್ಯುನ್ನತ ಶ್ರೇಣಿ, 110 ಪ್ರಥಮ ಶ್ರೇಣಿ, 20 ದ್ವಿತೀಯ ಶ್ರೇಣಿಯಲ್ಲಿ, 5 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಆರ್.ಎಂ.ವೆಂಕಟ್ಪುನಿತ್ ಮತ್ತು ಫಾಜಿಲ್ 588 (ಶೇ.98) ಅಂಕಗಳನ್ನು ಗಳಿಸಿ ರಾಜ್ಯಕ್ಕೆ 9ನೇ ರ್ಯಾಂಕ್ ಪಡೆದಿದ್ದಾರೆ. ಚಂದನ್ಕುಮಾರ್, ಟಿ.ಎಂ.ಹರ್ಷಿತ್ ಸಿದ್ಧಾರ್ಥ್, 580 (ಶೇ.96.66), ಸುಮುಖ್ 578 (ಶೇ. 96.33)ಅಂಕಗಳನ್ನು ಪಡೆದವರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮಿನಾಲ್ ವೆಂಕಟೇಶ್ ಪೊನ್ಸರ್, 584 (ಶೇ.97.33), ಸಾನಿಯಾ ಮೊಂಡಾಲ್, 579 (ಶೇ.96.5), ಎಚ್.ಎಂ.ರವಿ, 577 (ಶೇ.96.16) ಅಂಕ ಗಳಿಸಿದ್ದಾರೆ.
ಕಾಲೇಜಿಗೆ ಅತ್ಯುತ್ತಮ ಅಂಕಗಳಿಸುವ ಮೂಲಕ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಹರಿಪ್ರಸಾದ್, ಸದಸ್ಯರಾದ ಲೋಕೇಶ್, ಬಿ.ಕೆ.ಪ್ರಸಾದ್, ವಿದ್ಯಾರ್ಥಿಗಳ ಪೋಷಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.