ಬೆಂಗಳೂರು: ಭಾರತ ರತ್ನ ಡಾ. ಬಿ.ಆರ್, ಅಂಬೇಡ್ಕರ್ ಅವರ ಜನ್ಮದಿನವನ್ನು ಸಂವಿಧಾನ ಉಳಿಸಿ, ಸರ್ವಾಧಿಕಾರ ತೊಲಗಿಸಿ ಎಂಬ ಘೋಷಣೆ ಮೂಲಕ ಆಚರಿಸಬೇಕಾದ ದುಸ್ಥಿತಿ ಭಾರತಕ್ಕೆ ಬಂದಿರುವುದು ಅತ್ಯಂತ ನೋವಿನ ವಿಚಾರ ಎಂದು ಮೋಹನ್ ದಾಸರಿ ಬೇಸರ ವ್ಯಕ್ತಪಡಿಸಿದರು.
ನಗರದ ಆಮ್ ಆದ್ಮಿ ಪಾರ್ಟಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಮಾತನಾಡುತ್ತ, ದೇಶದಲ್ಲಿ ಸರ್ವಾಧಿಕಾರ ಬಂದಿದೆ. ತನ್ನ ಎದುರಾಳಿಗಳನ್ನು ಪ್ರಜಾಪ್ರಭುತ್ವದ ಹಾದಿಯಲ್ಲಿ ಎದುರಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತಿರುವ ನರೇಂದ್ರ ಮೋದಿ ಸರ್ವಾಧಿಕಾರದ ಮೂಲಕ ವಿರೋಧವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ.
ರಾಜಕೀಯ ಎದುರಾಳಿಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಬಂಧಿಸಲಾಗುತ್ತಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ನಮ್ಮ ವರಿಷ್ಠರಾದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಅಕ್ರಮವಾಗಿ ಬಂಧಿಸಿದ್ದಾರೆ. ಬಿಜೆಪಿ, ಆರೆಸ್ಸೆಸ್ ಹಾಗೂ ನರೇಂದ್ರ ಮೋದಿ ಅವರಿಗೆ ಸಂವಿಧಾನ ಬೇಕಾಗಿಲ್ಲ, ಅವರಿಗೆ ಮನುಸ್ಮೃತಿಯನ್ನು ಭಾರತೀಯರ ಮೇಲೆ ಹೇರಿಕೆ ಮಾಡಲು ಹಾತೊರೆಯುತ್ತಿದ್ದಾರೆ ಎಂದು ಎಂದು ಕಿಡಿಕಾರಿದರು.
ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಘನತೆಯ ಬದುಕನ್ನು ಕೊಟ್ಟಿರುವುದು ಸಂವಿಧಾನ. ಆದರೆ ಈ ಸಂವಿಧಾನವನ್ನು ಬದಲಿಸುವ ಮೂಲಕ ಮೇಲ್ಜಾತಿಗರು, ಉಳ್ಳವರು ಮಾತ್ರ ಬದುಕಬೇಕು. ಬಡವರು, ಮಹಿಳೆಯರು ಹಾಗೂ ದಲಿತರು ಅವರ ಸೇವೆ ಮಾಡಿಕೊಂಡಿರಬೇಕು ಎಂಬ ಆಲೋಚನೆ ಬಿಜೆಪಿಗರದ್ದಾಗಿದೆ. ಸ್ವಾತಂತ್ರ್ಯ ಸಿಗುವ ಮೊದಲು ದೇಶದಲ್ಲಿದ್ದ ಅಸಮಾನತೆ, ಜಾತಿಯತೆ ಎಲ್ಲವೂ ಪುನಃ ಹಂತಹಂತವಾಗಿ ಭಾರತದಲ್ಲಿ ಬೇರೂರುವಂತೆ ಬಿಜೆಪಿ ಮಾಡುತ್ತಿದೆ. ಇದು ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ ಎಂದರು.ಪಕ್ಷದ ಮುಖಂಡರಾದ ಸಂಚಿತ್ , ಗೋಪಾಲ್, ಜಗದೀಶ್ ಚಂದ್ರ, ಅಶೋಕ್ ಮೃತ್ಯುಂಜಯ, ಮುನೇಶ್ ಕುಮಾರ್ ಸೇರಿದಂತೆ ಮತ್ತಿತರ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.