ದುಬಾ: ಇಲ್ಲಿ ನಡೆಯುತ್ತಿರುವ ಏಷ್ಯನ್ 20ರೊಳಗಿನ ವಯೋಮಾನದವರ ಆಯತ್ಲೆಟಿಕ್ಸ್ ಚಾಂಪಿಯನ್ಶಿಪ್ನ ಪುರುಷರ ಜಾವೆಲಿನ್ ಎಸೆತದಲ್ಲಿ ದೀಪಾಂಶು ಶರ್ಮ ಬಂಗಾರದ ಪದಕ ಜಯಿಸಿದ್ದಾರೆ. ಈ ವಿಭಾಗದಲ್ಲಿ ಬೆಳ್ಳಿ ಪದಕವೂ ಭಾರತದ ರೋಹನ್ ಯಾದವ್ ಪಾಲಾಗಿದೆ.
ಭಾರತ ಈವರೆಗೆ ಒಟ್ಟು 5 ಪದಕಗಳನ್ನು ಗಳಿಸಿದೆ. 70.29 ಮೀ. ದೂರ ಎಸೆತದೊಂದಿಗೆ ದೀಪಾಂಶು ಬಂಗಾರಕ್ಕೆ ಕೊರಳೊಡ್ಡಿದರೆ, 70.03 ಮೀ. ಎಸೆತದೊಂದಿಗೆ ರೋಹನ್ ಬೆಳ್ಳಿ ತನ್ನದಾಗಿಸಿಕೊಂಡರು. ಪುರುಷರ 1,500 ಮೀ. ಓಟದಲ್ಲಿ ಪ್ರಿಯಾಂಶುಗೆ ಬೆಳ್ಳಿ, ಮಹಿಳೆಯರ 10 ಕಿ.ಮೀ. ವೇಗದ ನಡಿಗೆಯಲ್ಲಿ ಆರತಿ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ, ಪುರುಷರ ಡಿಸ್ಕಸ್ ಎಸೆತದಲ್ಲಿ ರಿತಿಕ್ ರಾಥೀ ಭಾರತ ಪರ ಮೊದಲ ಪದಕವಾಗಿ ಬೆಳ್ಳಿ ಗೆದ್ದಿದ್ದರು. ಈ ಕ್ರೀಡಾಕೂಟದಲ್ಲಿ ಒಟ್ಟಾರೆ ಭಾರತದಿಂದ 60 ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಇದರಲ್ಲಿ 31 ಮಂದಿ ಪುರುಷರಿದ್ದರೆ, 29 ಮಂದಿ ಮಹಿಳೆಯರಿದ್ದಾರೆ. ಎ. 27ಕ್ಕೆ ಕೂಟ ಮುಕ್ತಾಯಗೊಳ್ಳಲಿದ್ದು, ಭಾರತಕ್ಕೆ ಇನ್ನೂ ಪದಕಗಳು ಬರುವ ನಿರೀಕ್ಷೆಯಿದೆ.