ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಮತಗಟ್ಟೆ ಧ್ವಂಸ ಪ್ರಕರಣ ಸಂಬಂಧ ಕಾರಾಗೃಹದಲ್ಲಿ ಬಂಧಿಯಾಗಿದ್ದ ಗ್ರಾಮಸ್ಥರನ್ನು ಜಾಮೀನಿನ ಮೇಲೆ ಜಿಲ್ಲಾ ಬಿಜೆಪಿ ಓಬಿಸಿ ಜಿಲ್ಲಾಧ್ಯಕ್ಷ ಜನಧ್ವನಿ ವೆಂಕಟೇಶ್ ಹಾಗೂ ಬೇಡಗಂಪಣ ಸಮಾಜದ ಮುಖಂಡರುಗಳು ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಏಪ್ರಿಲ್ 26ರಂದು ನಡೆದ ಮೊದಲನೇ ಹಂತದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆಕಸ್ಮಿಕವಾಗಿ ಮತಗಟ್ಟೆ ದ್ವಂಸ ಪ್ರಕರಣ ಮಾಡಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದರಿಂದ ಗ್ರಾಮಸ್ಥರ ಮೇಲೆ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು. ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದರಿಂದ ವಿಚಲಿತರಾಗಿದ್ದ ಗ್ರಾಮಸ್ಥರು ಕೆಲವರು ತಲೆಮರಿಸಿಕೊಂಡಿದ್ದರು, ಇನ್ನು ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಇಂಡಿಗನತ್ತ ಗ್ರಾಮಸ್ಥರು ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ಚುನಾವಣಾ ಬಹಿಷ್ಕಾರ ಮಾಡಿದ್ದರು. ಆದರೆ ಕೆಲವು ಸಂಗತಿಗಳು ಗ್ರಾಮಸ್ಥರನ್ನು ರೊಚ್ಚಿಗೇಳುವಂತೆ ಮಾಡಿ ಈ ಕಹಿ ಘಟನೆ ನಡೆಯುವಂತೆ ಮಾಡಿತು. ಘಟನಾ ಸಂದರ್ಭದಲ್ಲಿ ಕೆಲವರು ತನ್ನದಲ್ಲದ ತಪ್ಪಿಗೆ ಮಹಿಳೆಯರು, ಮಕ್ಕಳು, ವಯೋವೃದ್ಧರು ಶಿಕ್ಷೆ ಅನುಭವಿಸುವಂತಾಯಿತು.
ಮತಗಟ್ಟೆ ದ್ವಂಸ ಪ್ರಕರಣದಲ್ಲಿ ಇಂಡಿಗನತ್ತ ಗ್ರಾಮದ 46 ಜನರನ್ನು ಬಂಧಿಸಲಾಗಿತ್ತು. ಏಪ್ರಿಲ್ 28ರಂದು ಒಬಿಸಿ ಜಿಲ್ಲಾಧ್ಯಕ್ಷ ಜನದ್ವನಿ ವೆಂಕಟೇಶ್ ರವರು ಮಾಧ್ಯಮದವರೊಂದಿಗೆ ಮಾತನಾಡಿ ಇಂತಹ ಘಟನೆ ಕ್ಷೇತ್ರದಲ್ಲಿ ನಡೆಯಬಾರದಾಗಿತ್ತು ಆದರೆ ನಡೆದುಹೋಗಿದೆ. ಇದು ಉದ್ದೇಶಪೂರ್ವಕವಾಗಿ ಆಗಿಲ್ಲ ಆಕಸ್ಮಿಕವಾಗಿ ನಡೆದಿದೆ ಎಂದು ತಿಳಿಸಿದ್ದರು.
ಇದಲ್ಲದೇ ಬೇಡಗಂಪಣ ಸಮುದಾಯದ ಅಧ್ಯಕ್ಷ ಪುಟ್ಟಣ್ಣ, ಹಿರಿಯ ಮುಖಂಡರಾದ ಕೆವಿ ಮಾದೇಶ್, ಮುರುಗೇಶ್ ಪುರಾಣಿ ಮಹೇಶ್ ಸಿದ್ದರಾಜು ರವರ ಸಹಾಯದೊಂದಿಗೆ ಕೊಳ್ಳೇಗಾಲದ ಹಿರಿಯ ವಕೀಲರಾದ ಶಶಿಬಿಂಬ ನೇತೃತ್ವದಲ್ಲಿ ವಕೀಲರ ತಂಡವನ್ನು ನೇಮಕ ಮಾಡಿ ಮೈಸೂರು ಮತ್ತು ಚಾಮರಾಜನಗರ ಕಾರಾಗೃಹದಲ್ಲಿದ್ದ ಇಂಡಿಗನತ್ತ ಗ್ರಾಮಸ್ಥರನ್ನು ಬಿಡುಗಡೆ ಮಾಡಿಸಲು ಮೊದಲ ದಿನದಿಂದಲೇ ಶ್ರಮಿಸಿದ್ದಾರೆ.
ಕಾರಾಗೃಹದಲ್ಲಿದ್ದ ಮಹಿಳೆಯರು, ಪುರುಷರಿಗೆ ಹೊಸ ಬಟ್ಟೆ ಹಾಗೂ ಅವರಿಗೆ ಅವಶ್ಯಕತೆವಾಗಿದ್ದ ಸಾಮಾಗ್ರಿಗಳನ್ನು ವಿತರಣೆ ಮಾಡಿ 46 ಜನರ ಬಿಡುಗಡೆಗೂ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ.ಗ್ರಾಮಸ್ಥರನ್ನು ಕಾರಾಗೃಹಕ್ಕೆ ಕರೆದುಕೊಂಡು ಹೋದ ದಿನದಿಂದ ಸತತವಾಗಿ 21 ದಿನಗಳ ಕಾಲವೂ ಅವರನ್ನು ಭೇಟಿಯಾಗಿ ಸಂತೈಸಿ ಧೈರ್ಯ ತುಂಬಿ ಜಾಮಿ?ನಿನ ಮೇಲೆ ಬಿಡುಗಡೆ ಮಾಡಿಸಲು ಯಶಸ್ವಿಯಾಗಿದ್ದಾರೆ.
ಮಾಧ್ಯಮದವರೊಂದಿಗೆ ಜನದ್ವನಿ ವೆಂಕಟೇಶ್ ಮಾತನಾಡಿ, ಇಂಡಿಗನತ್ತ ಗ್ರಾಮದಲ್ಲಿ ಆಕಸ್ಮಿಕವಾಗಿ ನಡೆದ ಘಟನೆಯಿಂದ ಗ್ರಾಮದ 20 ಮಹಿಳೆಯರು ಹಾಗೂ 26 ಪುರುಷರನ್ನು ಬಂಧಿಸಲಾಗಿತ್ತು. ಅವರು ಮುಗ್ಧರು ಅಮಾಯಕರು, ಕೆಲವೊಂದು ಘಟನೆಗಳು ನಮಗೆ ಗೊತ್ತಾಗದಂತೆ ನಡೆಯುತ್ತದೆ ಅದರಂತೆ ಈ ಕಹಿ ಘಟನೆಯು ನಡೆದಿದೆ. ಅವರ ಬೆಂಬಲವಾಗಿ ಇರುತ್ತೇನೆಂದು ಘಟನೆಯಾದ ಮರು ದಿನವೇ ತಿಳಿಸಿದ್ದೆ ಅಂದಿನಿಂದ ಇಂದಿನವರೆಗೂ ಅವರ ಜೊತೆ ಇದ್ದೇನೆ ಮುಂದೆಯೂ ಇರುತ್ತೇನೆ.
ಹಿರಿಯ ವಕೀಲರಾದ ಶಶಿ ಬಿಂಬ ರವರು ಇಂಡಿಗನತ್ತ ಗ್ರಾಮಸ್ಥರ ನೆರವಿಗೆ ಬಂದು 21 ದಿನದಲ್ಲಿ ಬಿಡುಗಡೆ ಮಾಡಿಸಿದ್ದಾರೆ. ಅವರಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ. ಗ್ರಾಮಸ್ಥರಿಗೆ ಯಾವುದೇ ನೆರವು ಬೇಕಿದ್ದರೂ ನಾನೇ ವೈಯಕ್ತಿಕವಾಗಿ ಅವರಿಗೆ ಬೆಂಬಲವಾಗಿರುತ್ತೇನೆ ಎಂದರು.
ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಗ್ರಾಮಸ್ಥರು ಮಾತನಾಡಿ ನಮ್ಮನ್ನು ವೈದ್ಯಕೀಯ ಚಿಕಿತ್ಸೆ ಮಾಡಿಸುತ್ತೇನೆ ಎಂದು ಕರೆದುಕೊಂಡು ಹೋದರು.
ನಾವು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ, ನಾವು ನಮ್ಮ ಹಕ್ಕಿಗಾಗಿ ಪ್ರತಿಭಟನೆ ಮಾಡಿದ್ದು ನಿಜ ಆದರೆ ಈ ತರಹ ಘಟನೆ ಆಗುತ್ತದೆ ಎಂದು ನಮಗೆ ಕೂಡ ತಿಳಿದಿರಲಿಲ್ಲ, ನಮ್ಮವರಿಗೆ ತೊಂದರೆಯಾಗುತ್ತಿದೆ ಎಂದು ಹೋಗಿದ್ದೆವು, ಆದರೆ ಗಲಾಟೆ ಮಾಡುವ ಉದ್ದೇಶ ಇರಲಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ.
ಇಂಡಿಗನತ್ತ ಗ್ರಾಮದ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಸಿಎಸ್ ನಿರಂಜನ್ ಕುಮಾರ್ ರವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಚರ್ಚಿಸಿದ್ದರು.
ಕಾರಾಗೃಹದಲ್ಲಿ ಬಂಧಿಯಾಗಿದ್ದ ಇಂಡಿಗನತ್ತ ಗ್ರಾಮಸ್ಥರು ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್ ಮಹೇಶ್ ಹಾಗೂ ಬಿಜೆಪಿ ಹಿರಿಯ ಮುಖಂಡ ಮಂಗಲ ಶಿವಕುಮಾರ್, ಮಂಡಲ ಅಧ್ಯಕ್ಷರುಗಳಾದ ರಾಜು ವೃಷಭೇಂದ್ರ ಸ್ವಾಮಿ ಭೇಟಿ ಮಾಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ.