ಬೆಂಗಳೂರು: ಬಿಬಿಎಂಪಿಗೆ ಬರಬೇಕಾದ ಆಸ್ತಿ ತೆರಿಗೆಯನ್ನು ಪಾವತಿಸದೆ ತೆರಿಗೆ ವಂಚನೆ ಮಾಡುತ್ತಿರುವ ವಿರುದ್ಧ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಲು ಬಿಬಿಎಂಪಿ ಮುಂದಾಗಿದೆ. ಇಂದಿನಿಂದ ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ತೆರಿಗೆ ಪಾವತಿಸಲು ಕಟ್ಟುನಿಟ್ಟಿನ
ಕ್ರಮ ಜರುಗಿಸಲು ಬಿಬಿಎಂಪಿ ಇಂದಿನಿಂದ ಬಾರಿ ಕಾರ್ಯಾಚರಣೆಗೆ ಮುಂದಾಗಿದೆ.
ಬಿಬಿಎಂಪಿಗೆ ಬರಬೇಕಾದ ಬಹುಪಾಲು ಆದಾಯ ಆಸ್ತಿ ತೆರಿಗೆ ಪಾವತಿಯಿಂದಲೇ ಬರಬೇಕಾಗಿದೆ. ಹಾಗಾಗಿ ಕೆಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದೆ ಬಹುತೇಕ ಮಂದಿ ಬಾಕಿ ಉಳಿಸಿಕೊಂಡಿದ್ದಾರೆ.ಇದರಿಂದ ಬಿಬಿಎಂಪಿಯ ಅಭಿವೃದ್ಧಿ ಕಾರ್ಯಗಳಿಗೆ ಭಾರೀ ಹೊಡೆತ ಬಿದ್ದಿದೆ. ಹೀಗಾಗಿ ಶತಾಯಗತಾಯ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹ ಮಾಡಲು ಬಿಬಿಎಂಪಿ ಮೆಗಾ ಯೋಜನೆ ಸಿದ್ದಪಡಿಸಿಕೊಂಡಿದೆ ಎಂದು ಹೇಳಲಾಗಿದೆ.
ಇಂದಿನಿಂದ ಬಹಳಷ್ಟು ಮೊತ್ತದ ಆಸ್ತಿ ತೆರಿಗೆ ಉಳಿಸಿಕೊಂಡವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ತೆರಿಗೆ ಪಾವತಿಸಲು ಸಾಕಷ್ಟು ಅವಕಾಶ ಕೊಟ್ಟರೂ ತೆರಿಗೆ ಪಾವತಿಸದಿದ್ದಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದ್ದು ತೆರಿಗೆ ವಸೂಲಿ ಮಾಡದೆ ಅಭಿವೃದ್ಧಿ ಕಾರ್ಯಗಳಿಗೆ ಹಣ ಹೊಂಚುವುದು ಅಸಾಧ್ಯದ ಮಾತು ಎಂದು ಅಧಿಕಾರಿಗಳು ಹೇಳತೊಡಗಿದ್ದಾರೆ.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಕಟ್ಟಡ ಮಾಲೀಕರಿಗೆ ಕಳೆದ ಮೂರು ತಿಂಗಳ ಹಿಂದೆ 50% ರಷ್ಟು ಬಡ್ಡಿ ಮನ್ನಾ ಮಾಡಿ ತೆರಿಗೆ ಕಟ್ಟುವಂತೆ ವಿನಾಯಿತಿ ನೀಡಲಾಗಿತ್ತು. ಆದರೂ ಕೂಡ ಕಟ್ಟಡ ಮಾಲೀಕರು ಬಾಕಿ ಅಸ್ತಿ ತೆರಿಗೆ ಪಾವತಿ ಮಾಡದೇ ಪಾಲಿಕೆಗೆ ವಂಚನೆ ಮಾಡುತ್ತಿದ್ದಾರೆ. ಅಂದಾಜು 2 ಲಕ್ಷಕ್ಕೂ ಅಧಿಕ ಆಸ್ತಿಗಳು ಕಳೆದ ಕೆಲವು ವರ್ಷಗಳಿಂದ ಕ್ರಮವಾಗಿ ತೆರಿಗೆ ಪಾವತಿಸಿಲ್ಲ. ಈಗಾಗಲೇ ಹಲವು ಬಾರಿ ನೋಟೀಸ್ ಹಾಗೂ ಮೊಬೈಲ್ ಮೂಲಕ ಸಂದೇಶ ರವಾನಿಸಿ ತೆರಿಗೆ ಪಾವತಿಗೆ ಪಾಲಿಕೆ ಕೇಳಿಕೊಂಡಿದೆ. ಅದಾಗಿಯೂ ತೆರಿಗೆದಾರರು ಪಾಲಿಕೆ ಮನವಿಗೆ ಕ್ಯಾರೇ ಎನ್ನಲಿಲ್ಲ. ಹೀಗಾಗಿ ತೆರಿಗೆ ವಸೂಲಿಗೆ ಕಟ್ಟಡ ಸೀಜ್ ಮಾಡಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.