ಬೆಂಗಳೂರು: ರಾಜ್ಯ ಹಾಲು ಮಹಾಮಂಡಳಿ ವತಿಯಿಂದ ಹಾಲಿನ ದರವನ್ನು ಏರಿಕೆ ಮಾಡಲಾಗಿದೆ.ಪ್ರತಿ ಲೀಟರ್ ಹಾಲಿಗೆ 2 ರೂ.ನಂತೆ ಹೆಚ್ಚಿಸಲಾಗಿದ್ದು, ನಾಳೆಯಿಂದಲೇ ಪರಿಷ್ಕøತ ದರ ಜಾರಿಗೆ ಬರಲಿದೆ.
ಈಗಾಗಲೇ ಸಾವಿರ ಎಂಎಲ್ ಹಾಲಿನ್ನು 42 ರೂ.ನಂತೆ ಮಾರಾಟ ಮಾಡಲಾಗುತ್ತಿದ್ದು, ಹೆಚ್ಚುವರಿಯಾಗಿ 50 ಎಂಎಲ್ ಹಾಲು ಸೇರಿಸಿ ಒಟ್ಟು 1050 ಎಂಎಲ್ ಹಾಲಿಗೆ 2 ರೂ. ಹೆಚ್ಚಳ ಮಾಡಿ ಮಾರಾಟ ಮಾಡಲಾಗುವುದು ಎಂದು ರಾಜ್ಯ ಹಾಲು ಮಹಾಮಂಡಳಿ ಅಧ್ಯಕ್ಷ ಭೀಮಾನಾಯ್ಕ್ ಮಾಧ್ಯಮವೊಂದರೊಂದಿಗೆ ಮಾತನಾಡಿ ತಿಳಿಸಿದ್ದಾರೆ.
ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ದರ 22ರಿಂದ 24 ರೂ.ಗೆ ಏರಿಕೆಯಾಗಲಿದೆ. ಮೊಸರು, ಇನ್ನಿತರ ಯಾವುದೇ ಹಾಲಿನ ಉತ್ಪನ್ನದ ದರ ಏರಿಕೆ ಮಾಡಲ್ಲ. ಕೇರಳದಲ್ಲಿ ಒಂದು ಲೀಟರ್ ಹಾಲಿನ ಬೆಲೆ 52 ರುಪಾಯಿ ಇದೆ. ಗುಜರಾತ್ನಲ್ಲಿ ಅಮುಲ್ ಒಂದು ಲೀಟರ್ಗೆ 56 ರೂ. ಮಹಾರಾಷ್ಟ್ರದಲ್ಲಿ 56 ರೂ. ದೆಹಲಿ ಮದರ್ ಡೈರಿಯ ಹಾಲಿನ ಬೆಲೆ 54 ರೂ. ಇದೆ ಎಂದು ಎಂದು ಭೀಮಾನಾಯ್ಕ್ ಹೇಳಿದ್ದಾರೆ.
ರಾಜ್ಯದಲ್ಲಿ ಸದ್ಯಕ್ಕೆ ನಂದಿನಿ ಹಾಲಿನ ದರ ಏರಿಕೆ ಮಾಡುವ ಯಾವುದೇ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಕೆಲವು ತಿಂಗಳ ಹಿಂದೆ ಹೇಳಿದ್ದರು. ಆದರೆ, ಇದೀಗ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಹಾಲಿನ ದರ ಏರಿಕೆ ಮಾಡಲಾಗಿದೆ. ಇದು ಸಹಜವಾಗಿ ಮಧ್ಯಮ ವರ್ಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.