ಮೈಸೂರು: ತಮ್ಮ ವಿರುದ್ಧ ಬಿಜೆಪಿ ಮತ್ತುಜೆಡಿಎಸ್ನವರು ನಡೆಸುತ್ತಿರುವ ಪಾದಯಾತ್ರೆವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಜನಾಂದೋಲನ ಮುಕ್ತಾಯ ಸಮಾರಂಭಕ್ಕೆ ಅತಿ ಹೆಚ್ಚು ಜನರನ್ನು ಸೇರಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ.
ಇಂದು ಮೈಸೂರಿನಲ್ಲಿ ಚಾಮರಾಜನಗರ ಮೈಸೂರು ಹಾಗೂ ಕೊಡಗು ಜಿಲ್ಲೆಗಳ ಪಕ್ಷದ ಶಾಸಕರೊಂದಿಗೆ ಉಪಹಾರ ಸಭೆ ನಡೆಸಿದ ಮುಖ್ಯಮಂತ್ರಿಯವರು ಜನಾಂದೋಲನಾ ಸಮಾವೇಶದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.ಈ ಸಭೆಯಲ್ಲಿ ಸಚಿವರಾದ ಹೆಚ್.ಸಿ. ಮಹಾದೇವಪ್ಪ ಕೆ.ವೆಂಕಟೇಶ್, ಶಾಸಕರಾದ ರವಿಶಂಕರ್, ಹರೀಶ್ಗೌಡ, ಅನಿಲ್ ಚಿಕ್ಕಮಾದು, ಎ.ಆರ್. ಕೃಷ್ಣಮೂರ್ತಿ, ಸಲಹೆಗಾರರಾದ ಪೊನ್ನಣ್ಣ ಮತ್ತಿತರರು ಹಾಜರಿದ್ದರು.
9ರಂದು ನಡೆಯಲಿರುವ ಜನಾಂದೋಲನಾ ಮುಕ್ತಾಯ ಸಮಾರಂಭವನ್ನು ಈ ಹಿಂದೆ ದಾವಣಗೆರೆಯಲ್ಲಿ ನಡೆಸಿದ್ದ ತಮ್ಮ ಹುಟ್ಟುಹಬ್ಬದ ಸಮಾರಂಭದ ಸಿದ್ದರಾಮೋತ್ಸವ ಮಾದರಿಯಲ್ಲಿ ಈ ಸಮಾವೇಶವನ್ನು ನಡೆಸಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.