ನವದೆಹಲಿ: ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ಇನ್ನು 1 ವಾರವಷ್ಟೇ ಬಾಕಿ ಉಳಿದಿದೆ. ಇದಕ್ಕೂ ಮುಂಚಿತವಾಗಿ ಕಾರ್ಯಕ್ರಮವನ್ನು ಆಯೋಜಿಸಲು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಯನ್ನು ಅನುಸರಿಸಿ ಮುಂದಿನ ವಾರ ಭಾರತೀಯ ಜನತಾ ಪಕ್ಷವು (ಬಿಜೆಪಿ) ರಾಷ್ಟ್ರದಾದ್ಯಂತ `ಹರ್ ಘರ್ ತಿರಂಗ’ ಅಭಿಯಾನವನ್ನು ಪ್ರಾರಂಭಿಸಲು ಸಿದ್ಧವಾಗಿದೆ.
ಜುಲೈ 28ರಂದು ತಮ್ಮ `ಮನ್ ಕಿ ಬಾತ್’ ರೇಡಿಯೋ ಪ್ರಸಾರದಲ್ಲಿ ಪಿಎಂ ನರೇಂದ್ರ ಮೋದಿ ಹರ್ ಘರ್ ತಿರಂಗ ಅಭಿಯಾನದ ಕುರಿತು ಮಾತನಾಡಿದ್ದರು. harghartiranga.com ವೆಬ್ಸೈಟ್ನಲ್ಲಿ ರಾಷ್ಟ್ರಧ್ವಜದೊಂದಿಗೆ ಸೆಲ್ಫಿಗಳನ್ನು ಅಪ್ಲೋಡ್ ಮಾಡುವಂತೆ ಜನರ ಬಳಿ ಮನವಿ ಮಾಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಹರ್ ಘರ್ ತಿರಂಗ ಅಭಿಯಾನವು ಕಳೆದ ಎರಡು ವರ್ಷಗಳಲ್ಲಿ ರಾಷ್ಟ್ರೀಯ ಆಂದೋಲನವಾಗಿ ವಿಕಸನಗೊಂಡಿದ್ದು, ರಾಷ್ಟ್ರದ ಉದ್ದಗಲಕ್ಕೂ ಇರುವ ಪ್ರತಿಯೊಬ್ಬ ಭಾರತೀಯನಲ್ಲೂ ಮೂಲಭೂತ ಏಕತೆಯನ್ನು ಜಾಗೃತಗೊಳಿಸಿದೆ.
ಈ ಆಂದೋಲನವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಮತ್ತೆ ಅದೇ ಉತ್ಸಾಹದಿಂದ ಭಾಗವಹಿಸಲು ನಾನು ಎಲ್ಲಾ ನಾಗರಿಕರಲ್ಲಿ ಮನವಿ ಮಾಡುತ್ತೇನೆ ಎಂದು ಗೃಹ ಸಚಿವ ಅಮಿತ್ ಶಾ ವಿನಂತಿಸಿದ್ದರು.ಆಗಸ್ಟ್ 11ರಿಂದ ಆಗಸ್ಟ್ 13ರವರೆಗೆ ಬಿಜೆಪಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಿರಂಗ ಯಾತ್ರೆ ನಡೆಸಲಿದೆ.