ನವದೆಹಲಿ: ಕ್ರೀಡಾ ಸಚಿವಾಲಯದಿಂದ ವೈಯಕ್ತಿಕ ಹಣಕಾಸಿನ ನೆರವು ಪಡೆದಿಲ್ಲ: ಅಶ್ವಿನ: ‘ಪ್ಯಾರಿಸ್ ಒಲಿಂಪಿಕ್ಸ್ಗೆ ಸಿದ್ಧತೆ ನಡೆಸಲು ಕ್ರೀಡಾ ಸಚಿವಾಲಯದಿಂದ ಯಾವುದೇ ವೈಯಕ್ತಿಕ ಹಣಕಾಸಿನ ನೆರವು ಪಡೆದಿಲ್ಲ. ಜೊತೆಗೆ ವೈಯಕ್ತಿಕ ತರಬೇತುದಾರನನ್ನು ನಿಯೋಜಿಸುವಂತೆ ಸಲ್ಲಿಸಿದ ಕೋರಿಕೆಯನ್ನು ತಿರಸ್ಕರಿಸಲಾಗಿತ್ತು’ ಎಂದು ಬ್ಯಾಡ್ಮಿಂಟನ್ ಡಬಲ್ಸ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ಯಾರಿಸ್ಗೆ ತೆರಳಿದ ಭಾರತದ ಅಥ್ಲೀಟ್ಗಳಿಗೆ ಆರ್ಥಿಕ ನೆರವು ನೀಡಿದ ಕುರಿತು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ಎಐ) ವಿವರವಾದ ದಾಖಲೆಗಳನ್ನು ಬಿಡುಗಡೆ ಮಾಡಿತ್ತು. ಅದರಂತೆ ಅಶ್ವಿನಿ ಅವರಿಗೆ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯಡಿ (ಟಿಒಪಿಎಸ್) ರೂ.4.50 ಲಕ್ಷವನ್ನು ನೀಡಲಾಗಿತ್ತು. ವಾರ್ಷಿಕ ಕ್ಯಾಲೆಂಡರ್ ಅಡಿಯಲ್ಲಿ ರೂ.1.48 ಕೋಟಿ ಒದಗಿಸಲಾಗಿದೆ.
ಅದರಲ್ಲಿ ಆಟಕ್ಕೆ ಅಗತ್ಯವಿರುವ ಸಲಕರಣೆ, ಅಂತರರಾಷ್ಟ್ರೀಯ ಸ್ಪರ್ಧೆ ಹಾಗೂ ಸಹ ಆಟಗಾರರ ಖರ್ಚು ಸೇರಿದೆ ಎಂದು ಹೇಳಲಾಗಿತ್ತು. ‘ಈ ಮಾಹಿತಿ ನಿಜಕ್ಕೂ ಆಘಾತಕಾರಿ. ನಮಗೆ ಇಷ್ಟೊಂದು ಹಣ ಕೊಟ್ಟಿರುವುದಾಗಿ ದೇಶಕ್ಕೆ ಸಾರಿರುವುದು ಹಾಸ್ಯಾಸ್ಪದ. ನನಗೆ ಯಾವುದೇ ಹಣ ನೀಡಿಲ್ಲ. ರಾಷ್ಟ್ರೀಯ ಶಿಬಿರದ ಕುರಿತು ಮಾತನಾಡಲಾಗಿದೆ. ಆಗ ನೀಡಿದ ರೂ.1.5 ಕೋಟಿ ಎಲ್ಲಾ ಆಟಗಾರರ ಮೇಲೂ ಖರ್ಚು ಮಾಡಲಾಗಿತ್ತು’ ಎಂದು ಕರ್ನಾಟಕದ ಅಶ್ವಿನಿ ಅವರು ಪಿಟಿಐಗೆ ಪ್ರÀತಿಕ್ರಿಯಿಸಿದ್ದಾರೆ.