ದೇವನಹಳ್ಳಿ: ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳು ಎಂದು ಘೋಷಣೆ ಮಾಡಲಾಗಿದ್ದು ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಅಭಾವವಾಗದಂತೆ ನೋಡಿಕೊಂಡು ಬರ ಪರಿಸ್ಥಿತಿಯನ್ನು ಸಮಗ್ರವಾಗಿ ಎದುರಿಸಿ ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ ಫಾಹಿಂ ಅವರು ಅಧಿಕಾರಿಗಳಿಗೆ ಸೂಚಿಸಿದರು.
ದೇವನಹಳ್ಳಿ ತಾಲೂಕಿನ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬರ ಪರಿಸ್ಥಿತಿಯ ಬಗ್ಗೆ ಚರ್ಚಿಸಿ ಪ್ರಸಕ್ತ ಸಾಲಿನಲ್ಲಿ ಜನವರಿ 1 ರಿಂದ ಅಕ್ಟೋಬರ್ 26 ರವರೆಗೆ 716 ಮಿ.ಮೀ ವಾಡಿಕೆ ಮಳೆಗೆ 598 ಮಿ.ಮೀ ಮಳೆಯಾಗಿದ್ದು ಶೇಕಡ 17% ರಷ್ಟು ಮಳೆ ಕೊರತೆಯಾಗಿದೆ, ಜಿಲ್ಲೆಯಲ್ಲಿ ರಾಗಿ ಪ್ರಮುಖ ಬೆಳೆಯಾಗಿದ್ದು ತನೆ ಬೆಳವಣಿಗೆ ಹಂತದಲ್ಲಿದೆ.ಮಳೆ ಕೊರತೆಯಿಂದ ಇಳುವರಿ ಕಡಿಮೆಯಾಗಿದೆ ಎಂದರು.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಸಮಸ್ಯೆ ಆಗದಂತೆ ಕ್ರಮವಹಿಸಿ ಅವಶ್ಯವಿದ್ದಲ್ಲಿ ಖಾಸಗಿಯಾಗಿ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಮಾಡಿಕೊಳ್ಳಿ ಎಂದರು.ಮಾದಕ ವಸ್ತುಗಳ ಮಾರಾಟ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹೆಚ್ಚಿನ ಕ್ರಮ ವಹಿಸಿ, ಮಾಲಿನ್ಯಕಾರಕ ಪಟಾಕಿ ಮಾರಾಟ, ಸಾಗಾಟ ಅಂಗಡಿಗಳ ಮೇಲೆ ದಾಳಿ ನಡೆಸಿ, ಅವರ ವಿರುದ್ಧ ಕ್ರಮ ವಹಿಸಿ ಹಸಿರು ಪಟಾಕಿ ಮಾರಾಟಕ್ಕೆ ಅನುಮತಿ ನೀಡಿ ಎಂದು ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿದರು.
ಜಾನುವಾರುಗಳಿಗೆ ಆಹಾರ ಮೇವು ಕೊರತೆ ಉಂಟಾಗದಂತೆ ಕ್ರಮವಹಿಸಿ, ಮೇವು ಸಂಗ್ರಹ ಕೇಂದ್ರಗಳನ್ನು ತೆರೆದು ರೈತರಿಗೆ ಮಾಹಿತಿ ನೀಡಬೇಕು. ಅನ್ನ ಭಾಗ್ಯ ಯೋಜನೆ ಅಡಿ 231009 ಫಲಾನುಭವಿಗಳಿದ್ದು ಅದರಲ್ಲಿ 1,91,976 ಫಲಾನುಭವಿಗಳಿಗೆ ಡಿ.ಬಿ.ಟಿ ಮೂಲಕ ನೇರವಾಗಿ 11,05,62,390/- ಕೋಟಿ ರೂಗಳು ಸೆಪ್ಟೆಂಬರ್ ಮಾಹೆಯಲ್ಲಿ ಜಮೆಯಾಗಿದೆ.
ಉಳಿದಂತೆ ವಿವಿಧ ಕಾರಣಗಳಿಂದ ಹಣ ಜಮೆ ಆಗಿರದ ಫಲಾನುಭವಿಗಳಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯಲ್ಲಿ ಇರುವ ಸಮಸ್ಯೆಗಳ ಬಗ್ಗೆ ತಿಳಿಸಿ. ಸಮಸ್ಯೆ ಬಗೆಹರಿಸಿಕೊಂಡು ಮುಂದಿನ ಮಾಹೆಯೊಳಗೆ ಎಲ್ಲಾ ಅರ್ಹ ಫಲಾನುಭವಿಗಳಿಗೆ ಡಿ. ಬಿ. ಟಿ ಮೂಲಕ ಜಮೆಯಾಗಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಗೃಹಲಕ್ಷ್ಮಿ ಯೋಜನೆ ಅಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 1,96,662 ಫಲಾನುಭವಿಗಳು ನೋಂದಣಿ ಆಗಿರುತ್ತಾರೆ. ಬಾಕಿ ಇರುವ ಫಲಾನುಭವಿಗಳಿಗೆ ಗ್ರಾಮಮಟ್ಟದಲ್ಲಿ ಪ್ರಚಾರ ಮಾಡಿ, ಜಾಗೃತಿ ಮೂಡಿಸಿ,ಮಾಹಿತಿ ನೀಡಿ ನೋಂದಾಯಿಸಿಕೊಳ್ಳಲು ಕ್ರಮವಹಿಸಿ ಎಂದರಲ್ಲದೆ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸುವ ಕೇಂದ್ರಗಳಿಗೆ ಭೇಟಿ ನೀಡಿ ನೋಂದಾವಣೆ ಪ್ರಕ್ರಿಯೆಯನ್ನು ಪರಿಶೀಲಿಸಿ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವಿದ್ಯಾರ್ಥಿನಿಲಯಗಳಿಗೆ ನಿವೇಶನ ಹಂಚಲು ಕ್ರಮ ವಹಿಸಿ ಎಂದು ಹೇಳಿದರು.ಕೃಷಿ, ತೋಟಗಾರಿಕೆ ಇಲಾಖೆಯ ಬೆಳೆಗಳಿಗೆ ಸಂಬಂಧಿಸಿದಂತೆ ಬಿತ್ತನೆ ಬೀಜ, ರಸಗೊಬ್ಬರ, ಔಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳಿ ಎಂದರಲ್ಲದೆ ರೈತರಿಗೆ ಸೂಕ್ತ ಮಾರ್ಗದರ್ಶನ, ಸಲಹೆ ನೀಡಿ ಎಂದರು.
ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಪೂರೈಕೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿಎಂದರು.ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಪ್ರಗತಿ ಪರಿಶೀಲನೆ ನಡೆಸಿ ಬಾಕಿ ಇರುವ ರಸ್ತೆ, ಸೇತುವೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಎಂದರು. ನರೇಗಾ ಯೋಜನೆಯಡಿ ಇಲಾಖೆಗಳಲ್ಲಿ ಬಾಕಿ ಇರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ.
ಶೇಕಡಾವಾರು ಪ್ರಗತಿ ಕಡಿಮೆ ಸಾಧಿಸಿರುವ ಇಲಾಖೆಗಳಿಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿ ವರದಿ ನೀಡಿ ಎಂದರು.
2024-25 ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಉದ್ಯೋಗ ಖಾತರಿ ನಡೆ ಸುಸ್ಥಿರ ತೆಯಡೆಗೆ ಎಂಬ ಕ್ರಿಯಾ ಯೋಜನೆ ತಯಾರಿಸಲು ಗ್ರಾಮ ಪಂಚಾಯಿತಿಗಳಿಗೆ ಐಇಸಿ ಕಾರ್ಯಕ್ರಮದ ನರೇಗಾ ಭಿತ್ತಿಪತ್ರಗಳ ಬಿಡುಗಡೆಗೊಳಿಸಿದರು.
ನಂತರ ದೇವನಹಳ್ಳಿ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಭೇಟಿ ನೀಡಿ ಔಷಧಿಗಳ ಕೊಠಡಿಯಲ್ಲಿ ಔಷಧಿಗಳು ಪರಿಶೀಲಿಸಿದರು, ಮಹಿಳಾ ಮತ್ತು ಮಕ್ಕಳ ಕೊಠಡಿಯನ್ನು ಪರಿಶೀಲಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಡಾ.ಅನುರಾಧ ಕೆ.ಎನ್, ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಮೇಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.