ಇಸ್ಲಾಮಾಬಾದ್: ಪಾಕಿಸ್ಥಾನಿ ಕ್ರಿಕೆಟಿಗರಿಗೆ ಅಲ್ಲಿನ ಕ್ರಿಕೆಟ್ ಮಂಡಳಿ 5 ತಿಂಗಳಿ ನಿಂದ ವೇತನವನ್ನೇ ನೀಡಿಲ್ಲ! ಇಂಥ ದ್ದೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ, ಪಾಕ್ ತಂಡದ ಮಾಜಿ ನಾಯಕ ರಶೀದ್ ಲತೀಫ್.ಸ್ಥಳೀಯ ಸುದ್ದಿವಾಹಿನಿಯೊಂದರ ಚರ್ಚೆಯಲ್ಲಿ ಭಾಗವಹಿಸಿದ್ದಾಗ ಲತೀಫ್ ಹೀಗೆ ಆರೋಪಿಸಿದ್ದಾರೆ.
ಪಾಕ್ ತಂಡದ ನಾಯಕ ಬಾಬರ್ ಆಜಂ ಅವರು ಪಿಸಿಬಿ ಅಧ್ಯಕ್ಷ ಝಕಾ ಅಶ್ರಫ್, ಸಿಒಒ ಸಲ್ಮಾನ್ ನಾಸೀರ್ ಅವರನ್ನು ಸಂಪರ್ಕಿಸಲು ಬಹಳ ಪ್ರಯತ್ನಿಸಿದ್ದಾರೆ. ಅವರಿಬ್ಬರೂ ಸ್ಪಂದಿಸುತ್ತಿಲ್ಲ.
ಈ ಮಧ್ಯೆ ಕೇಂದ್ರೀಯ ಗುತ್ತಿಗೆಯನ್ನು ಪುನರ್ರಚನೆ ಮಾಡಲಾಗುತ್ತದೆ ಎಂದು ಪಿಸಿಬಿ ಹೇಳಿಕೊಂಡಿದೆ. ನೀವು ಹೀಗೆ ಮಾಡಿದರೆ ಆಟಗಾರರು ನಿಮ್ಮ ಮಾತನ್ನು ಹೇಗೆ ಕೇಳುತ್ತಾರೆ ಎಂದು ಲತೀಫ್ ಪ್ರಶ್ನಿಸಿದ್ದಾರೆ.
ಈ ಎಲ್ಲ ವಿವಾದಗಳು ಪಾಕ್ ತಂಡದ ನಾಯಕತ್ವದಿಂದ ಬಾಬರ್ರನ್ನು ತೆಗೆಯಲಾಗುತ್ತದೆ ಎಂದು ಖಚಿತವಾಗುತ್ತಿದ್ದಂತೆಯೇ ಹುಟ್ಟಿಕೊಂಡಿವೆ.