ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದವರು ಅತ್ಯುತ್ತಮ ಸಾಧಕರಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಹಾಗಾಗಿ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಶಾಸಕ ಕೆ.ಗೋಪಾಲಯ್ಯ ಅವರು ತಿಳಿಸಿದರು.
ವೃಷಭಾವತಿ ನಗರದ ಸರ್ಕಾರಿ ಶಾಲೆಯಲ್ಲಿ ಸೈನ್ಸ್ ಲ್ಯಾಬ್ ಹಾಗೂ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಿ ಅವರು ಮಾತನಾಡಿದರು.ಸರ್ಕಾರಿ ಶಾಲೆಗಳಲ್ಲಿ ಉತ್ತಮ ಅನುಭವವಿರುವ ಬೋಧಕರಿದ್ದಾರೆ. ಮಕ್ಕಳು ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಿ ತಮ್ಮ ಮುಂದಿನ ಭವಿಷ್ಯಕ್ಕೆ ದಾರಿಮಾಡಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಶಾಲೆಯಲ್ಲಿ ನಡೆಸುವಂತಹ ಎಲ್ಲಾ ರೀತಿಯ ಆಟೋಟ ಸ್ಪರ್ಧೆಗಳಲ್ಲಿ ವಿಧ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಬೇಕು ಎಂದರು.ನೂತನ ವಿಜ್ಞಾನ ಪ್ರಯೋಗಾಲಯದ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡು, ನಿರಂತರ ಓದುವ ಅಭ್ಯಾಸದಲ್ಲಿ ತೊಡಗಿ ಉತ್ತಮ ಫಲಿತಾಂಶದಿಂದ ಉತ್ತೀರ್ಣರಾಗಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಜಿ. ಆಂಜನಪ್ಪ, ಮುಖ್ಯ ಶಿಕ್ಷಕ ಕುಮಾರಸ್ವಾಮಿ, ಸಿಆರ್ ಪಿ ಲಕ್ಷ್ಮಿ ನಾರಾಯಣ, ರಾಜಣ್ಣ ಸೇರಿದಂತೆ ಶಾಲೆಯ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.