ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರ ನೇಮಕಗೊಂಡ ನಂತರ ಅಸಮಾಧಾನಗೊಂಡಿರುವ ಹಿರಿಯ ಮುಖಂಡ ಮಾಜಿ ಸಚಿವ ವಿ. ಸೋಮಣ್ಣ ಡಿಸೆಂಬರ್ 6ರ ಬಳಿಕ ನನ್ನ ಮನಸ್ಸಿನ ಭಾವನೆ ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿಕೆಗೆ ನನ್ನ ಸಮ್ಮತಿ ಇದೆ. ನಮ್ಮ ಪಕ್ಷದಲ್ಲಿ ಒಂದು ರೀತಿ ಸೋಮನಹಳ್ಳಿ ಮುದುಕಿ ಕಥೆ ಆಗಿದೆ. ಡಿಸೆಂಬರ್ 6ರ ಬಳಿಕ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ. ಯಾವ ರೀತಿ ನನಗೆ ಹೊಡೆತ ಆಗಿದೆ ಎಂಬುದನ್ನು ವಿವರಿಸುತ್ತೇನೆ. ರಾಜಕಾರಣ ಯಾವುದೇ ಮನೆತನಕ್ಕೆ ಸಿಮೀತವಲ್ಲ ಎಂದು ಪರೋಕ್ಷವಾಗಿ ಸ್ವಪಕ್ಷದ ನಾಯಕರ ವಿರುದ್ಧ ಅದರಲ್ಲೂ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧವಾಗ್ದಾಳಿ ನಡೆಸಿದ್ದಾರೆ.
ರಾಜಕಾರಣ ನಾಟಕ ಕಂಪನಿ ಅಲ್ಲ, ಒಳ ಒಪ್ಪಂದಕ್ಕೆ ಸಿಮೀತವಲ್ಲ. ನನ್ನನ್ನು ಯಾರು ಸಂಪರ್ಕಿಸಿಲ್ಲ, ನಾನೂ ಯಾರನ್ನು ಸಂಪರ್ಕಿಸಿಲ್ಲ. ಡಿಸೆಂಬರ್ 6ರ ಬಳಿಕ ನನ್ನ ಮನಸ್ಸಿನ ಭಾವನೆ ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಸೋಮಣ್ಣ ನಡೆ ಸಂಚಲನ ಮೂಡಿಸಿದೆ.
ಹೈಕಮಾಂಡ್ ಸೂಚನೆ ಮೇರೆಗೆ ಸೋಮಣ್ಣ ಅವರು ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ತಮ್ಮ ವಿಜಯನಗರ ಕ್ಷೇತ್ರ ಬಿಟ್ಟು ಸಿದ್ದರಾಮಯ್ಯನವರ ವಿರುದ್ಧ ವರುಣಾದಲ್ಲಿ ಸ್ಪರ್ಧಿಸಿದ್ದರು. ಅಲ್ಲದೇ ಚಾಮರಾನಗರ ಕ್ಷೇತ್ರಕ್ಕೂ ಸ್ಪರ್ಧೆ ಮಾಡಿದ್ದರು. ಆದ್ರೆ, ಎರಡೂ ಕ್ಷೇತ್ರಗಳಲ್ಲಿ ಸೋಮಣ್ಣ ಸೋಲುಕಂಡಿದ್ದರು. ಬಳಿಕ ತಮ್ಮನ್ನು ರಾಜಕೀಯವಾಗಿ ಬಲಿ ಕೊಟ್ಟರು ಎಂದು ಸ್ವಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಪಕ್ಷದ ಕಾರ್ಯಚವಟಿಕೆಗಳಿಂದ ದೂರು ಉಳಿದುಕೊಂಡಿದ್ದಾರೆ.