ದೊಡ್ಡಬಳ್ಳಾಪುರ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಒಂದು ತಿಂಗಳ ಅವಧಿಯಲ್ಲಿ 500ಕ್ಕೂ ಹೆಚ್ಚು ಜನರಿಗೆ ನಾಯಿಗಳು ಕಚ್ಚಿದ ಪ್ರಕರಣಗಳು ವರದಿಯಾಗಿತ್ತು, ಸಾರ್ವಜನಿಕರಿಂದ ಅಕ್ರೋಶ ವ್ಯಕ್ತವಾದ ಹಿನ್ನಲೆ ಬೀದಿನಾಯಿಗಳ ನಿಯಂತ್ರಣಕ್ಕೆ ನಗರಸಭೆ ಮುಂದಾಗಿದೆ.
ದೊಡ್ಡಬಳ್ಳಾಪುರ ನಗರದ ಯಾವುದೇ ಬೀದಿಗಳಲ್ಲಿ ನೋಡಿದರೂ ಹಿಂಡು ಹಿಂಡಾಗಿ ನಾಯಿಗಳು ಕಾಣಿಸುತ್ತವೆ, ಬೀದಿನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ವಿಳಂಬವಾದ ಹಿನ್ನಲೆ ಬೀದಿನಾಯಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ, ಕಳೆದೊಂದು ತಿಂಗಳ ಅವಧಿಯಲ್ಲಿ ನಗರದಲ್ಲಿ 500ಕ್ಕೂ ಹೆಚ್ಚು ಜನರಿಗೆ ನಾಯಿ ಕಚ್ಚಿದ ಪ್ರಕರಣಗಳು ವರದಿಯಾಗಿದೆ,ಅತಿ ಹೆಚ್ಚು ಮಕ್ಕಳು ಸೇರಿದಂತೆ ವಯೋವೃದ್ಧರ ಮೇಲೆ ನಾಯಿಗಳು ದಾಳಿಮಾಡಿವೆ, ಬೀದಿ ನಾಯಿಗಳಿಗೆ ಕಡಿವಾಣ ಹಾಕದ ನಗರಸಭೆಯ ವಿರುದ್ಧ ಸಾರ್ವಜನಿಕರ ದೂರುಗಳು ಬಂದಿದ್ದವು ಹಾಗೂ ಆಕ್ರೋಶ ವ್ಯಕ್ತವಾಯಿತು.
ಇದೇ ಕಾರಣದಿಂದ ಸೂಕ್ತ ಕ್ರಮಕ್ಕೆ ನಗರಸಭೆ ಮುಂದಾಗಿದೆ ಎಂದು ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್ ಅವರು ಪ್ರತಿಕ್ರಿಯಿಸಿ ರೂ. 16 ಲಕ್ಷ ವೆಚ್ಚದಲ್ಲಿ 1220 ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲು ಚಾಲನೆ ನೀಡಲಾಗಿದೆ ಎಂದರು.
ಬೀದಿನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಈರಣ್ಣ ಬೀದಿನಾಯಿಗಳ ನಿಯಂತ್ರಣಕ್ಕಾಗಿ ನಗರಸಭೆಯಲ್ಲಿ ಶಸ್ತ್ರಚಿಕಿತ್ಸೆಗೆ 20 ಲಕ್ಷ ರೂಗಳನ್ನು ಮೀಸಲಿಡಲಾಗಿದೆ, ಕಳೆದ ವರ್ಷ ನಡೆದ ಕಾರ್ಯಚರಣೆ ಯಲ್ಲಿ 720 ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಕಿತ್ಸೆ ಮಾಡಲಾಗಿತ್ತು, ಈ ಬಾರಿ ಗುತ್ತಿಗೆದಾರರ ಅಲಭ್ಯದ ಕಾರಣದಿಂದ ಕಾರ್ಯಚರಣೆ ವಿಳಂಬವಾಗಿದೆ.
ಬೆಳಗಾವಿಯ ಲೂನಾ ಎಂಟರ್ ಪ್ರೈಸಸ್ ನವರು ಬೀದಿ ನಾಯಿಗಳ ಶಸ್ತ್ರಚಕಿತ್ಸೆ ಮಾಡುವ ಗುತ್ತಿಗೆಯನ್ನು ಪಡೆದಿದ್ದಾರೆ, ಪ್ರತಿಯೊಂದು ನಾಯಿಗೆ 1300 ರೂಪಾಯಿ ನಿಗದಿ ಮಾಡಲಾಗಿದ್ದು, ಒಟ್ಟು 1220 ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮತ್ತು ರೇಬೀಸ್ ನಿರೋಧಕ ಚುಚ್ಚುಮದ್ದನ್ನು ನೀಡಲಾಗುವುದು ಎಂದರು.
ಪ್ರತಿದಿನ 40 ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗುವುದು, ಶಸ್ತ್ರಚಿಕಿತ್ಸೆಯ ನಂತರ ಮೂರು ದಿನಗಳ ಆರೈಕೆಯ ನಂತರ, ಶಸ್ತ್ರ ಚಿಕಿತ್ಸೆಗೆ ಒಳಗಾದ ನಾಯಿಗಳ ಕಿವಿಯನ್ನು ವಿ ಆಕಾರದಲ್ಲಿ ಕತ್ತರಿಸಿ ಎಲ್ಲಿ ನಾಯಿಗಳನ್ನ ಹಿಡಿದು ತರಲಾಗಿತ್ತೋ ಅದೇ ಜಾಗಕ್ಕೆ ನಾಲ್ಕನೇ ದಿನ ಬಿಡಲಾಗುವುದು,ಬೀದಿ ನಾಯಿಗಳ ಕಾರ್ಯಚಾರಣೆಗೆ ಹೋದಾಗ ಜನರು ತಮ್ಮ ನಾಯಿಗಳನ್ನ ಮನೆಯಲ್ಲಿ ಕಟ್ಟಿಹಾಕಿಕೊಳ್ಳುತ್ತಾರೆ, ಇದರಿಂದ ಕಾರ್ಯಚರಣೆ ಕಷ್ಟವಾಗುತ್ತಿದೆ, ಬೀದಿ ನಾಯಿಗಳ ನಿಯಂತ್ರಣಕ್ಕೆ ಸಾರ್ವಜನಿಕರು ಸಹ ಸಹಕರಿಸುವಂತೆ ಮನವಿ ಮಾಡಿಕೊಂಡರು.