ಬೆಂಗಳೂರು: ವಿದ್ಯಾರ್ಥಿಗಳು ಪ್ರಾಂಶುಪಾಲರು, ಪ್ರಾಧ್ಯಾಪಕರೆಲ್ಲರೂ ಸೇರಿ ಇಂದು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿರುವುದನ್ನು ನೋಡಲು ಹರ್ಷವಾಗುತ್ತಿದೆ. ಆದರೆ, ಇದು ಒಂದು ದಿನದ ಆಚರಣೆಯಾಗದೆ ದಿನ ನಿತ್ಯವೂ ನಾವು ಕನ್ನಡ ಭಾಷೆಯ ಅಭಿವೃದ್ಧಿಗೆ ಶ್ರಮಿಸಬೇಕು. ಕನ್ನಡದ ಕೆಲಸವನ್ನು ಮುಂದೂಡಬಾರದು.
ಮಾತೃಭಾಷೆಯನ್ನು ಗೌರವಿಸುವುದರ ಜೊತೆಗೆ “ನಿಮ್ಮ ಸ್ನೇಹಿತರಿಗೆ ಕಲಿಸಿ, ಕನ್ನಡ ಉಳಿಸಿ ಬೆಳೆಸಿ ” ಎಂದು ನಾಗಾರ್ಜುನ ಸಮೂಹ ಸಂಸ್ಥೆಯ ನಿರ್ದೇಶಕರಾದ ಎಸ್ ಜಿ ಗೋಪಾಲಕೃಷ್ಣರವರು ನೆರೆದಿದ್ದ ವಿದ್ಯಾರ್ಥಿಗಳಿಗೆ ಸಲಹೆಯನ್ನಿತ್ತರು. ಅವರು ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿಜೃಂಭಣೆಯಿಂದ ನಡೆದ ಕಾರ್ಯಕ್ರಮದಲ್ಲಿ ನಾಗಾರ್ಜುನ ಪದವಿ ಕಾಲೇಜಿನ ಪ್ರಾಂಶುಪಾಲರು ಹಾಗೂ ವ್ಯವಹಾರ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾಕ್ಟರ್ ಹರೀಶ್ ಬಾಬು ಎಸ್ ಮತ್ತು ವಾಣಿಜ್ಯ ವಿಷಯ ಸಂಯೋಜಕರಾದ ಡಾಕ್ಟರ್ ರಾಘವೇಂದ್ರ, ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ . ಮಂಜುನಾಥ್ ಟಿ .ಎನ್, ಮತ್ತು ಎಲ್ಲ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ಭಾಷೆಯ ಹಾಡುಗಳನ್ನೇ ಆಯ್ದುಕೊಂಡು ನೃತ್ಯವನ್ನು ಮಾಡಿದ್ದು ಕಾರ್ಯಕ್ರಮಕ್ಕೆ ಮೆರಗು ತಂದಿತ್ತು.