ಬೆಂಗಳೂರು: ಕೆಡಿಡಿಎಲ್ ವಾಚ್ ತಯಾರಿಕ ಕಂಪನಿಯ ಮ್ಯಾನೇಜರ್, ಸೂಪರ್ವೈಜರ್ ಕಿರುಕುಳದಿಂದ ಬೇಸತ್ತ ಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಟಿ.ದಾಸರಹಳ್ಳಿಯಲ್ಲಿ ನಡೆದಿದೆ.
ರಜೆ ತೆಗೆದುಕೊಂಡಿದ್ದಕ್ಕೆ ಕಿರುಕುಳ, ಕೆಲಸದಿಂದ ತಗೆಯುವ ಬೆದರಿಕೆ ಹಾಕಿದ್ದಾಗಿ ಮೊಬೈಲ್ ವಾಯ್ಸ್ ರೆಕಾರ್ಡಿಂಗ್, ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ದಾಸರಹಳ್ಳಿಯಲ್ಲಿ ನೆಲೆಸಿದ್ದ ಅಂಧ್ರಪ್ರದೇಶದ ಗುಡಿಬಂಡೆ ನಿವಾಸಿ ಗೋವಿಂದ (24) ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ.
ಕಳೆದ ಆರು ವರ್ಷಗಳಿಂದ ಪೀಣ್ಯಾದ ಕೆಡಿಡಿಎಲ್ ವಾಚ್ ತಯಾರಿಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗೋವಿಂದ ಅವರು ರಾತ್ರಿ ಆರ್ ಎಂಪಿ ಅಪಾರ್ಟ್ ಮೆಂಟ್ ನಲ್ಲಿ ನಿರ್ವಹಣಾ ಕೆಲಸ ಮಾಡಿಕೊಂಡು ತಂಗಿದ್ದರು.ಎಂದಿನಂತೆ ಕಂಪನಿ ಕೆಲಸ ಮುಗಿಸಿ ರಾತ್ರಿ ವೇಳೆ ಅಪಾರ್ಟ್ಮೆಂಟ್ನ ಮೆಟ್ಟಿಲಿನ ಕಂಬಿಗೆ ತಾಯಿಯ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಬಾಗಲಗುಂಟೆ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ಮ್ಯಾನೇಜರ್ ಗುರುರಾಜ, ಸೂಪರ್ವೈಜರ್ ನಂಜಪ್ಪ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.